ನವದೆಹಲಿ: 2023ರ ಕೊನೆಯ ಚಂದ್ರಗ್ರಹಣ ಶನಿವಾರ ರಾತ್ರಿ ಸಂಭವಿಸಿತು. ಖಂಡಗ್ರಾಸ ಗ್ರಹಣವು ಒಟ್ಟು 3 ಗಂಟೆ 7 ನಿಮಿಷಗಳ ಕಾಲ ನಡೆಯಿತು. ಅಕ್ಟೋಬರ್ 29ರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭವಾದ ಗ್ರಹಣವು 2 ಗಂಟೆ 24 ನಿಮಿಷಕ್ಕೆ ಕೊನೆಗೊಂಡಿದೆ.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಪೂಜಾ ಸಮಯ ಬದಲಾವಣೆ ಮಾಡಲಾಗಿತ್ತು. ಸಂಜೆ 6 ಗಂಟೆ ನಂತರ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಕೆಲವು ದೇವಾಲಯಗಳಲ್ಲಿ ಭಕ್ತರ ದರ್ಶನ ಮತ್ತು ಮತ್ತು ವಿವಿಧ ರೀತಿಯ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಭಕ್ತರು ವಿಶೇಷ ಗ್ರಹಣ ದೋಷ ಪೂಜೆಗಳಲ್ಲಿ ಭಾಗಿಯಾದರು. ಗ್ರಹಣ ಮೋಕ್ಷದ ಬಳಿಕ ವಿವಿಧ ದೇಗುಲಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಪವಿತ್ರ ಜಲದಿಂದ ಶುದ್ಧೀಕರಿಸಿದ ಬಳಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ:ದೇಶದ ಪ್ರಸಿದ್ಧ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಅರ್ಚಕರು ನದಿ ನೀರಿನಲ್ಲಿ ದೇವಾಲಯ ಶುದ್ಧಗೊಳಿಸಿದರು. ಬಳಿಕ ಮಹಾಕಾಲನಿಗೆ ವಿಶೇಷ ಪೂಜೆ ಸಲ್ಲಿಸಿ, ಭಸ್ಮಾರತಿ ಮಾಡಲಾಯಿತು. ನೂರಾರು ಭಕ್ತರು ಭಾಗವಹಿಸಿದ್ದರು. ಗ್ರಹಣದಿಂದಾಗಿ ಉತ್ತರಾಖಂಡ್ನ ಹರಿದ್ವಾರದ ಹರ್ ಕಿ ಪೌರಿಯಲ್ಲಿ ಭಕ್ತರು ಮಂತ್ರ ಪಠಣ, ಧ್ಯಾನ, ಹೋಮ ಹವನದಲ್ಲಿ ಪಾಲ್ಗೊಂಡರು.