ಲಖನೌ(ಉತ್ತರಪ್ರದೇಶ):ಲಂಪಿ ಚರ್ಮ ರೋಗ (ಎಲ್‌ಎಸ್‌ಡಿ) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಎಲ್ಲ ಜಾನುವಾರು ಜಾತ್ರೆಗಳನ್ನು ಸ್ಥಗಿತಗೊಳಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಜಾನುವಾರುಗಳಿಗೆ ಎಲ್‌ಎಸ್‌ಡಿ ವಿರುದ್ಧ ಲಸಿಕೆ ಹಾಕಲು ವಿಶೇಷ ಲಸಿಕೆ ಅಭಿಯಾನವನ್ನು ಸಹ ಕೈಗೊಳ್ಳಲಾಗುವುದು ಎಂದು ಅವರು ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ಇನ್ನು ಮುಂದೆ ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಲಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
ಇತರ ರಾಜ್ಯಗಳಲ್ಲಿ ವೈರಸ್‌ನಿಂದ ಹಲವಾರು ಜಾನುವಾರುಗಳು ಸಾವನ್ನಪ್ಪಿರುವುದರಿಂದ, ವೈರಸ್ ಹರಡುವುದನ್ನು ತಡೆಯಲು ಉತ್ತರ ಪ್ರದೇಶವು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ಅಂತಾರಾಜ್ಯ ಜಾನುವಾರು ಸಾಗಣೆ ತಕ್ಷಣವೇ ನಿಲ್ಲಿಸಬೇಕು. ಜಾನುವಾರುಗಳನ್ನು ಸಾಕುವವರಿಗೆ ಈ ವೈರಸ್‌ನ ಲಕ್ಷಣಗಳು ಮತ್ತು ಚಿಕಿತ್ಸೆಯ ಬಗ್ಗೆ ತಿಳಿಸಬೇಕು. ಗೋಶಾಲೆಗಳಿಗೆ ಅನಗತ್ಯವಾಗಿ ಜನರು ಪ್ರವೇಶಿಸುವುದನ್ನು ಸಹ ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರದೊಂದಿಗೆ ಸಮನ್ವಯ ಸಾಧಿಸಲು ಪಶುಸಂಗೋಪನಾ ಇಲಾಖೆಗೂ ತಿಳಿಸಲಾಗಿದೆ. ನೊಣಗಳು ಮತ್ತು ಸೊಳ್ಳೆಗಳ ಮೂಲಕ ವೈರಸ್ ಹರಡುವುದರಿಂದ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ನೈರ್ಮಲ್ಯ ಖಚಿತಪಡಿಸಿಕೊಳ್ಳಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಮತ್ತು ಪಶುಸಂಗೋಪನೆ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಸೋಂಕಿತ ಜಾನುವಾರುಗಳು ಸತ್ತರೆ, ಅದನ್ನು ವೈದ್ಯಕೀಯ ಪ್ರೋಟೋಕಾಲ್ ಪ್ರಕಾರ ಸುಡಬೇಕು.
ಪೀಡಿತ ಜಿಲ್ಲೆಗಳಲ್ಲಿ ಮೀಸಲಾದ ಪಶುವೈದ್ಯಕೀಯ ಕೇಂದ್ರಗಳನ್ನು ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ದುಬೆ ತಿಳಿಸಿದ್ದಾರೆ. ಪಶುಸಂಗೋಪನಾ ನಿರ್ದೇಶನಾಲಯದಲ್ಲಿ 24 X 7 ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಸುಮಾರು 15 ಜಿಲ್ಲೆಗಳು ಎಲ್‌ಎಸ್‌ಡಿ ನಿದರ್ಶನಗಳನ್ನು ವರದಿ ಮಾಡಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಉತ್ತರ ಪ್ರದೇಶ ಪ್ರದೇಶದಲ್ಲಿ ನಿದರ್ಶನಗಳು ಹೆಚ್ಚಿವೆ.
ಉತ್ತರ ಪ್ರದೇಶ ಸರ್ಕಾರವು ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ದೆಹಲಿ ಮತ್ತು ಮಧ್ಯಪ್ರದೇಶದಿಂದ ರಾಜ್ಯಕ್ಕೆ ಜಾನುವಾರು ಮತ್ತು ಹಸುಗಳ ಸಾಗಣೆಯನ್ನು ನಿರ್ಬಂಧಿಸುವ ಪ್ರಯತ್ನಗಳನ್ನು ಮಾಡುತ್ತಿದೆ.
ಇದನ್ನು ಓದಿ:ರೇಖಿ ಹೀಲಿಂಗ್.. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಧ್ಯಾತ್ಮಿಕ ಚಿಕಿತ್ಸಾ ಪದ್ಧತಿ