ಜೈಪುರ: ಹಸುಗಳಿಗೆ ಮಾರಕವಾದ ಲಂಪಿ ಚರ್ಮ ರೋಗದ ಭೀತಿ ದೇಶದ ಉತ್ತರ ಭಾಗದ ಐದು ರಾಜ್ಯಗಳ ಪೈಕಿ ರಾಜಸ್ಥಾನದಲ್ಲಿ ಉಲ್ಭಣಗೊಂಡಿದೆ. ಇಲ್ಲಿನ 11 ಜಿಲ್ಲೆಗಳು ಹೆಚ್ಚು ಬಾಧಿತವಾಗಿವೆ ಎಂದು ಕೇಂದ್ರ ಪಶುಸಂಗೋಪನೆ ಸಚಿವ ಪುರುಷೋತ್ತಮ್ ರೂಪಾಲಾ ಶನಿವಾರ ಹೇಳಿದ್ದಾರೆ. ಕೇಂದ್ರದ ತಜ್ಞರ ತಂಡದೊಂದಿಗೆ ರೋಗಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಾನುವಾರುಗಳಿಗೆ ಹರಡುವ ಈ ಚರ್ಮ ರೋಗವನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತತ ಪ್ರಯತ್ನ ಮಾಡುತ್ತಿವೆ. ಶೀಘ್ರದಲ್ಲೇ ಇದನ್ನು ನಿಯಂತ್ರಿಸಲಾಗುತ್ತದೆ ಎಂದು ಸಚಿವರು ಭರವಸೆ ಕೊಟ್ಟರು. ಈ ರೋಗ ತಡೆಗೆ 'ಮೇಕೆ ಪೋಕ್ಸ್ ಲಸಿಕೆ' ಪರಿಣಾಮಕಾರಿಯಾಗಿದೆ. ಸೋಂಕಿತ ಪ್ರಾಣಿಗಳನ್ನು ಆರೋಗ್ಯವಂತ ಪ್ರಾಣಿಗಳಿಂದ ಪ್ರತ್ಯೇಕ ಇರಿಸಬೇಕು ಮತ್ತು ಆರೋಗ್ಯವಂತ ಪ್ರಾಣಿಗಳಿಗೆ ಲಸಿಕೆ ಹಾಕಬೇಕು ಎಂದು ಅವರು ಸೂಚಿಸಿದರು. ಇದರ ಜೊತೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ದಾನಿಗಳು, ಸಮಾಜ ಸೇವಕರು, ಜನಪ್ರತಿನಿಧಿಗಳಿಗೆ ಮನವಿ ಮಾಡಿ, ರಾಜ್ಯದ ಹಸುಗಳಿಗೆ ಬಂದಿರುವ ವಿಶಿಷ್ಠ ರೋಗ ತಡೆಗಟ್ಟಲು ಆರ್ಥಿಕವಾಗಿ ಸಹಕರಿಸುವಂತೆಯೂ ಮನವಿ ಮಾಡಿದ್ದಾರೆ.