ಲುದಿಯಾನಾ (ಪಂಜಾಬ್):ಸರ್ಕಾರದ ಮತ್ತು ಯಾವುದೇ ಸಂಸ್ಥೆಗಳ ಸಹಾಯವಿಲ್ಲದೇ ನೂರಕ್ಕೂ ಹೆಚ್ಚು ಅನಾಮಧೇಯ ಶವಗಳನ್ನು ಅಂತ್ಯಸಂಸ್ಕಾರ ಮಾಡುವ ಮೂಲಕ ಇಲ್ಲೊಬ್ಬ ಮಹಿಳೆ ಮಾನವೀಯತೆ ಮೆರೆದಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಅನಾಥ ಶವಗಳಿಗೆ ಅಂತಿಮ ವಿಧಿವಿಧಾನಗಳನ್ನು ನೆರೆವೇರಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ ಈ ಮಹಿಳೆ.
ಹೌದು, ಯಾವುದೇ ಫಲಾಪೇಕ್ಷೆಯಿಲ್ಲದೇ ತಮ್ಮನ್ನು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಲುದಿಯಾನಾ ಮೂಲದ ಪೂನಮ್ ಪತಾನಿಯಾ. 'ಮಾನವೀಯತೆ ದೃಷ್ಟಿಯಿಂದ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುತ್ತಿದ್ದೇನೆ. ಈ ಕಾರ್ಯ ನನ್ನ ಬದುಕಿನ ಭಾಗವಾಗಿದೆ' ಎಂದು ಪೂನಮ್ ಪತಾನೀಯಾ ಈ ಟಿವಿ ಭಾರತದೊಂದಿಗೆ ತಮ್ಮ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ.
ಕುಟುಂಬದ ಸದಸ್ಯರ ಸಾತ್ : ’’ಒಂದು ದಿನ ನನ್ನ ವಿದ್ಯಾರ್ಥಿಯ ತಂದೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ನೆರವೇರಿಸಲು ಯಾರು ಮುಂದೆ ಬರಲಿಲ್ಲ. ಅವರ ಆ ಸ್ಥಿತಿ ನನ್ನ ಮನಕಲಕುವಂತೆ ಮಾಡಿತು. ಹೀಗಾಗಿ ಅಂದಿನಿಂದಲೇ ಅನಾಮಧೇಯ ಶವಗಳ ಅಂತಿಮ ವಿಧಿವಿಧಾನಗಳನ್ನು ಮಾಡಲು ನಿರ್ಧರಿಸಿದೆ. ಯಾವುದೇ ಸಂಸ್ಥೆಗಳಿಂದಲೂ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೇ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಈ ಸೇವೆಗೆ ನನ್ನ ವಿದ್ಯಾರ್ಥಿಗಳು ಮತ್ತು ಕುಟುಂಬದ ಸದಸ್ಯರು ಬೆಂಬಲ ನೀಡುತ್ತಿದ್ದಾರೆ‘‘ ಎಂದು ಹೇಳುತ್ತಾರೆ ಪೂನಂ.
'ಎಲ್ಲ ಪರಿಶೀಲನೆ ನಡೆಸಿದಂತಹ ಶವಗಳ ಹಾಗೂ ಅಪರಿಚಿತ ಶವಗಳ ಸಂಸ್ಕಾರ ಮಾಡುತ್ತೀರಾ ಎಂದು ಪೊಲೀಸರು ನನಗೆ ಹಲವು ಬಾರಿ ಕೇಳಿದ್ದಾರೆ. ಮತ್ತು ಆ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ. ಅವರ ಮಾಹಿತಿಯಂತೆ ಅನಾಥ ಶವಗಳ ಸಂಸ್ಕಾರವನ್ನು ಮಾಡಿ ಮುಗಿಸಿದ್ದೇನೆ. ಅಂತ್ಯಕ್ರಿಯೆ ಮಾಡುವಾಗ ಕೆಲವು ಬಾರಿ ನಾನಾ ಸಮಸ್ಯೆಗಳನ್ನೂ ಎದುರಿದ್ದು ಕೂಡಾ ಇದೆ ಅಂತಾರೆ ಪೂನಂ.
ಕುಟುಂಬದಲ್ಲಿ ಹೆಚ್ಚಿನ ಗೌರವ: 'ಮಹಿಳೆಯರು ಅಂತ್ಯಸಂಸ್ಕಾರ ಮಾಡುವ ಕಾರ್ಯದಿಂದ ದೂರ ಉಳಿಯುವುದು ಸಾಮಾನ್ಯವಾಗಿದೆ. ಆದರೆ, ಅಪರಿಚಿತ ಶವಗಳ ಅಂತಿಮ ಕಾರ್ಯಗಳನ್ನು ಈ ಮಹಿಳೆಯೊಬ್ಬರೇ ಮಾಡುತ್ತಿರುವುದು ಗಮನಾರ್ಹ. ಮೊದಮೊದಲು ನಮ್ಮ ಕುಟುಂಬದ ಸದಸ್ಯರಿಗೆ ಈ ಕಾರ್ಯದ ಬಗ್ಗೆ ಹಿಂಜರಿಕೆಯಿತ್ತು. ಆದರೆ, ಸದ್ಯ ಎಲ್ಲಾ ಅರ್ಥ ಮಾಡಿಕೊಂಡಿರುವ ಕುಟುಂಬದ ಸದಸ್ಯರು, ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ನನ್ನೊಂದಿಗೆ ಕೈ ಜೋಡಿಸಿದ್ದಾರೆ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪೂನಂ ಕುಟುಂಬದಲ್ಲಿ ಈಗ ತುಂಬಾ ಗೌರವದಿಂದ ಕಾಣುತ್ತಾರೆ ಎಂದು ಹೇಳಿದ್ದಾರೆ.