ಕರ್ನಾಟಕ

karnataka

ETV Bharat / bharat

ಐಸಿಯು ವಾರ್ಡ್​ಗೆ ಶೂ ಧರಿಸಿ ಹೋಗಲು ಬಿಡಲಿಲ್ಲ ಎಂದು ಆಸ್ಪತ್ರೆ ಕೆಡವಲು ಬುಲ್ಡೋಜರ್‌​ ಕರೆಸಿದ ಮೇಯರ್!

Lucknow Mayor called Bulldozer to Hospital: ಉತ್ತರ ಪ್ರದೇಶದ ಲಖನೌ ಮಹಾನಗರ ಪಾಲಿಕೆ ಮೇಯರ್ ಸುಷ್ಮಾ ಖಾರ್ಕವಾಲ್​ ಅವರು ತಮಗೆ ಶೂ ಧರಿಸಿ ಐಸಿಯು ಘಟಕಕ್ಕೆ ತೆರಳಲು ಬಿಡಲಿಲ್ಲ ಎಂಬ ಕೋಪದಿಂದ ಸ್ಥಳಕ್ಕೆ ಬುಲ್ಡೋಜರ್‌ಗಳನ್ನು ಕರೆಸಿದ್ದರು ಎಂದು ವರದಿಯಾಗಿದೆ.

Lucknow Mayor called Bulldozer to hospital when she was stopped from entering in ICU with shoes
ಐಸಿಯು ವಾರ್ಡ್​ಗೆ ಶೂ ಧರಿಸಿ ಹೋಗಲು ಬಿಡಲಿಲ್ಲ ಎಂದು ಆಸ್ಪತ್ರೆಗೆ ಕೆಡವಲು ಬುಲ್ಡೋಜರ್‌​ ಕರೆಸಿದ ಮೇಯರ್!

By ETV Bharat Karnataka Team

Published : Aug 22, 2023, 9:23 PM IST

Updated : Aug 23, 2023, 7:10 AM IST

ಲಖನೌ (ಉತ್ತರ ಪ್ರದೇಶ): ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ಶೂ ಧರಿಸಿ ಹೋಗುವುದನ್ನು ತಡೆದಿದ್ದಕ್ಕೆ ಉತ್ತರ ಪ್ರದೇಶ ರಾಜಧಾನಿ ಲಖನೌ ಮಹಾನಗರ ಪಾಲಿಕೆ ಮೇಯರ್​ ರೊಚ್ಚಿಗೆದ್ದ ಘಟನೆ ಸೋಮವಾರ ನಡೆದಿದೆ. ಆಸ್ಪತ್ರೆಯನ್ನೇ ಕೆಡವಲು ಪಾಲಿಕೆ ಕಚೇರಿಯಿಂದ ಬುಲ್ಡೋಜರ್‌​ಗಳನ್ನು ಸ್ಥಳಕ್ಕೆ ಕರೆಸಿ ಮೇಯರ್​ ತಮ್ಮ 'ಪವರ್​' ತೋರಿಸಿದ್ದಾರೆ.

ಬಿಜ್ನೋರ್​ನಲ್ಲಿರುವ ವಿನಾಯಕ್ ಆಸ್ಪತ್ರೆಗೆ ಸುಷ್ಮಾ ಖಾರ್ಕವಾಲ್​ ಭೇಟಿ ನೀಡಿದ್ದರು. ಐಸಿಯು ಘಟಕದಲ್ಲಿ ದಾಖಲಾಗಿದ್ದ ಪಾಲಿಕೆಯ ನೌಕರರನ್ನು ನೋಡಲು ಅವರು​ ಬಂದಿದ್ದರು. ಈ ವೇಳೆ, ಮೇಯರ್​ ಸುಷ್ಮಾ ಹಾಗೂ ಅವರ ಜೊತೆಗೆ ಬಂದಿದ್ದ ಇತರ ಸಿಬ್ಬಂದಿ ಶೂ ಧರಿಸಿ ಐಸಿಯು ವಾರ್ಡ್​ಗೆ ಹೋಗುತ್ತಿದ್ದರು. ಇದನ್ನು ಗಮನಿಸಿದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಶೂ ಧರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೂ ಧರಿಸಿ ಹೋಗುವುದರಿಂದ ಸೋಂಕು ಹರಡುವ ಭೀತಿಯಿಂದ ಆಸ್ಪತ್ರೆಯವರು ಅವಕಾಶ ನೀಡಿಲ್ಲ ಎಂದು ಹೇಳಲಾಗುತ್ತಿದೆ.

ಇದೇ ವಿಚಾರವಾಗಿ ಮೇಯರ್​ ಹಾಗೂ ಆಸ್ಪತ್ರೆಯ ಸಿಬ್ಬಂದಿ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ತಮ್ಮ ಜೊತೆಗೆ ಅಸಭ್ಯವಾಗಿ ವರ್ತಿಸಿದರು ಎಂದು ಸುಷ್ಮಾ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಟ್ಟಿಗೆದ್ದ ಮೇಯರ್​ ಆಸ್ಪತ್ರೆಯ ಕಟ್ಟಡವನ್ನೇ ಕೆಡವಲು ಮುಂದಾಗಿದ್ದಾರೆ. ಇದಕ್ಕಾಗಿ ತಕ್ಷಣವೇ ತಮ್ಮ ಪಾಲಿಕೆ ಕಚೇರಿಯಿಂದ ಜಾರಿದಳ ಹಾಗೂ ಬುಲ್ಡೋಜರ್​ ಬರಬೇಕೆಂದು ನಿರ್ದೇಶನ ನೀಡಿದ್ದಾರೆ.

ಮೇಯರ್ ಸೂಚನೆಯಂತೆ ಕ್ಷಣದಲ್ಲೇ ಬುಲ್ಡೋಜರ್​ಗಳು​ ಸ್ಥಳಕ್ಕೆ ಆಗಮಿಸಿವೆ. ಇದರಿಂದ ಅಲ್ಲೋಲ ಕಲ್ಲೋಲ ಉಂಟಾಗಿದೆ. ಮತ್ತೊಂದೆಡೆ, ಜಾರಿ ದಳ ಕೂಡ ಸ್ಥಳಕ್ಕೆ ಬಂದು ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಅತಿಕ್ರಮಣ ಮಾಡಲಾಗಿದೆ ಎಂಬುದನ್ನು ಗುರುತಿಸಿದೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಇದರ ನಡುವೆ ಸದ್ಯಕ್ಕೆ ಬುಲ್ಡೋಜರ್‌ಗಳ ಕ್ರಮ ಸಾಧ್ಯವಾಗದಿದ್ದರೂ ಮುಂದಿನ ದಿನಗಳಲ್ಲಿ ಅತಿಕ್ರಮಣದ ವಿರುದ್ಧದ ಕ್ರಮ ಜರುಗಿಸಲಾಗುತ್ತದೆ ಎಂದು ಆಸ್ಪತ್ರೆಯ ಗೇಟ್‌ನಲ್ಲಿ ಎಚ್ಚರಿಕೆ ಪತ್ರವನ್ನು ಜಾರಿ ದಳ ಅಂಟಿಸಿದೆ. ಈ ಕುರಿತು ಮೇಯರ್​ ಸುಷ್ಮಾ ಖಾರ್ಕವಾಲ್ ಪ್ರತಿಕ್ರಿಯಿಸಿದ್ದು, ''ಶೂ ಧರಿಸಿ ಐಸಿಯು ವಾರ್ಡ್​ ಒಳಗೆ ಹೋಗಲು ಮುಂದಾಗಿದ್ದೆವು ಎಂಬುದು ಆಧಾರರಹಿತ ಆರೋಪ. ಈ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದೆ'' ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ''ನಮ್ಮ ನಿವೃತ್ತ ನೌಕರರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಚಿಕಿತ್ಸೆ ಹಾಗೂ ವೈದ್ಯಕೀಯ ವರದಿ ಬಗ್ಗೆ ಕುಟುಂಬಸ್ಥರು ನಮನಕ್ಕೆ ತಂದಿದ್ದರು. ಈ ಬಗ್ಗೆ ನಾನು ಆಡಳಿತ ಮಂಡಳಿಗೆ ದೂರು ನೀಡಲು ಬಂದಿದ್ದೆ'' ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಬುಲೋಜ್ಡರ್​ಗಳನ್ನು ಕರೆಸಿ ಕ್ರಮಕ್ಕೆ ಮುಂದಾಗಿದ್ದನ್ನು ನಿರಾಕರಿಸಿರುವ ಮೇಯರ್​, ''ಆಸ್ಪತ್ರೆಯಿಂದ ಅತಿಕ್ರಮಣವಾಗಿದ್ದು, ಈ ಕುರಿತು ತನಿಖೆ ನಡೆಸಲಾಗುವುದು'' ಎಂದರು.

ಇದನ್ನೂ ಓದಿ:ಹೆದ್ದಾರಿಗೆ ಅಡ್ಡಿಯಾಗಿದ್ದ ಮಂದಿರ - ಮಜಾರ್ ತೆರವು: ಮತ್ತೆ ಯೋಗಿ ನಾಡಲ್ಲಿ ಬುಲ್ಡೋಜರ್ ಘರ್ಜನೆ

Last Updated : Aug 23, 2023, 7:10 AM IST

ABOUT THE AUTHOR

...view details