ನವದೆಹಲಿ:ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವ ವಿಪಕ್ಷಗಳು, ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ಲೋಕಸಭೆ ಸ್ಪೀಕರ್ ಮುಂದೆ ಪ್ರಸ್ತಾಪ ಸಲ್ಲಿಸಿವೆ. ಸರ್ವಪಕ್ಷಗಳ ಜೊತೆಗೆ ನಡೆದ ಚರ್ಚೆಯ ಬಳಿಕ ದಿನಾಂಕ ನಿಗದಿಯಾಗಲಿದೆ. ಈ ಮೂಲಕ 8 ವರ್ಷಗಳ ಬಳಿಕ ಸರ್ಕಾರದ ವಿರುದ್ಧ ಇಂತಹ ಪ್ರಸ್ತಾಪ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನಮಗೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಬುಧವಾರ ಅವಿಶ್ವಾಸ ನಿರ್ಣಯವನ್ನು ಮಂಡಿಸಿದರು. ಇದನ್ನು ಸ್ಪೀಕರ್ ಕೂಡ ಒಪ್ಪಿಕೊಂಡಿದ್ದು, ಮಣಿಪುರ ಮತ್ತು ಇತರ ಜ್ವಲಂತ ಸಮಸ್ಯೆಗಳ ಕುರಿತು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ನಡುವಿನ ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದರು.
ಮಧ್ಯಾಹ್ನ 12 ಗಂಟೆಗೆ ಲೋಕಸಭೆ ಸದನ ಮರು ಆರಂಭವಾದಾಗ ಕಾಂಗ್ರೆಸ್ ಸಲ್ಲಿಸಿದ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಬಿರ್ಲಾ ಅವರು ಸದನದ ಮುಂದೆ ಓದಿ ಹೇಳಿದರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಗೌರವ್ ಗೊಗೊಯ್ ಅವರಿಂದ 198 ರ ಅಡಿಯಲ್ಲಿ ಪ್ರಸ್ತಾಪ ಬಂದಿದೆ. ಅದನ್ನು ನಾನು ಸ್ವೀಕರಿಸಿದ್ದೇನೆ ಎಂದು ಸದನಕ್ಕೆ ತಿಳಿಸಲು ಬಯಸುವೆ. ಪ್ರಸ್ತಾಪ ಮಂಡಿಸಲು ಸದನದ ಅನುಮತಿ ಪಡೆಯಲು ಗೌರವ್ ಗೊಗೋಯ್ ಅವರಲ್ಲಿ ಕೋರುತ್ತೇನೆ ಎಂದರು.
ಆಗ ಗೊಗೊಯ್ ಅವರು ಈ ಪ್ರಸ್ತಾವನೆಗೆ ಸದನದ ಅನುಮತಿಯನ್ನು ಕೋರಿದರು. ಆಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಟಿ ಆರ್ ಬಾಲು ಮತ್ತು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಆಪ್ ನಾಯಕರು ಸೇರಿದಂತೆ INDIA ಮೈತ್ರಿಕೂಟದ ಸದಸ್ಯ ಪಕ್ಷಗಳ ಸಂಸದರು ಎದ್ದು ನಿಂತು ತಲೆ ಎಣಿಕೆಗೆ ನಿಂತರು. ನಂತರ ಸ್ಪೀಕರ್ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಕೊಂಡರು.
ಬಿಆರ್ಎಸ್ನಿಂದಲೂ ಪ್ರಸ್ತಾಪ:ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಪ್ರಸ್ತಾಪ ಸಲ್ಲಿಸುವ ಮೊದಲು INDIA ಮೈತ್ರಿಕೂಟದ ಭಾಗವಾಗಿರದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ರಾವ್ ಅವರ ಮುಂದಾಳತ್ವದ ಬಿಆರ್ಎಸ್ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸ್ಪೀಕರ್ಗೆ ಮನವಿ ಮಾಡಿದೆ. ಬಿಆರ್ಎಸ್ ಸಂಸದ ನಾಮ ನಾಗೇಶ್ವರ ರಾವ್ ಅವರು ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ಸಲ್ಲಿಸಿದ್ದಾರೆ.