ನವದೆಹಲಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆನ್‌ಲೈನ್ ದೂರು ಪೋರ್ಟಲ್‌ಗೆ, 2017 ರಲ್ಲಿ ಪ್ರಾರಂಭವಾದಾಗಿನಿಂದ ಜುಲೈ 27, 2022 ರವರೆಗೆ ಕೇವಲ 1,349 ದೂರುಗಳು ಬಂದಿವೆ. ಕೆಲಸದ ಸ್ಥಳದಲ್ಲಿ ಎಷ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದರ ಅಂಕಿ- ಅಂಶವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶುಕ್ರವಾರ ಲೋಕಸಭೆಗೆ ಲಿಖಿತವಾಗಿ ನೀಡಿದ್ದಾರೆ.
ಕೇಂದ್ರದ ಆನ್‌ಲೈನ್ ದೂರು ಪೋರ್ಟಲ್ 'ಲೈಂಗಿಕ ಕಿರುಕುಳ ಎಲೆಕ್ಟ್ರಾನಿಕ್ ಬಾಕ್ಸ್ (ಶೀ-ಬಾಕ್ಸ್)' ಎಂಬ ಶೀರ್ಷಿಕೆಯಡಿಯಲ್ಲಿ ಸ್ಥಾಪಿಸಲಾಗಿತ್ತು. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ದೂರುಗಳ ದಾಖಲಾತಿಯನ್ನು ಪಡೆಯಲು, ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013 ರ ಅಡಿ 2017 ರಲ್ಲಿ ಸ್ಥಾಪಿಸಲಾಯಿತು. ಶೀ-ಬಾಕ್ಸ್ ಮೂಲಕ ಸಲ್ಲಿಸಲಾದ ದೂರು ಸೂಕ್ತ ಕ್ರಮಕ್ಕಾಗಿ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ ಎಂದು ಇರಾನಿ ಹೇಳಿದ್ದಾರೆ.