ತಿರುವಣ್ಣಾಮಲೈ (ತಮಿಳುನಾಡು) :ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಗೋಡೆ ಕುಸಿದು 8 ವರ್ಷದ ಬಾಲಕ ಮತ್ತು ಆತನ ತಾಯಿ ಸೇರಿದಂತೆ ಮೂವರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತಿರುವಣ್ಣಾಮಲೈನಲ್ಲಿ ನಡೆದಿದೆ.
ಈಗಾಗಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹತ್ತಿರದ ಅರಾನಿಯ ಮನೆಯೊಂದರಲ್ಲಿ ಅನಿಲ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟಗೊಂಡಾಗ, ಮಾಲೀಕ ಮತ್ತು ಬಾಡಿಗೆದಾರರ ಮನೆಯ ನಡುವಿದ್ದ ಗೋಡೆ ಕುಸಿದಿದೆ. ಪರಿಣಾಮ, ಬಾಡಿಗೆದಾರರಾದ ಜೆ. ಕಾಮಾಚಿ ಮತ್ತು ಆಕೆಯ ಮಗ ಜೆ. ಹೇಮನಾಥ್ ಮತ್ತು ನೆರೆಯ ಎಸ್. ಚಂದ್ರ ಸಾವನ್ನಪ್ಪಿದ್ದಾರೆ. ಕಾಮಾಚಿ ಅವರ ಪತಿ ಎಂ.ಜಾನಕಿರಾಮನ್ ಮತ್ತು ಇನ್ನೊಬ್ಬ ಮಗ ಜೆ.ಸುರೇಶ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟದ ಪರಿಣಾಮ ಪುಧುಕಮೂರ್ ರಸ್ತೆಯ ನಿವಾಸಿ ಡಿ.ಮುಕ್ತಾಬಾಯಿ (55 ) ಮತ್ತು ಮಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅರಾನಿಯ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಿಕ ಚಿಕಿತ್ಸೆಯ ನಂತರ, ಗಾಯಗೊಂಡ ಎಲ್ಲರನ್ನೂ ವೆಲ್ಲೂರಿನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾವಿನ ಬಗ್ಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಹಾಗೆಯೇ ಗಾಯಗೊಂಡವರಿಗೆ 50,000 ರೂ.ಗಳನ್ನು ಘೋಷಿಸಿದ್ದಾರೆ.