ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ಮಂಜಿನಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತೆ ಆಗಿದೆ. ಮಂಜಿನಿಂದಾಗಿ ಗೋಚರತೆ ಪ್ರಮಾಣ ಕ್ಷೀಣಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ವಿಮಾನಗಳ ಹಾರಾಟ ವಿಳಂಬವಾಗಿದೆ. ದೆಹಲಿ - ಶಿಮ್ಲಾ, ದೆಹಲಿ - ಕಠ್ಮಂಡು, ದೆಹಲಿ - ಚೆನ್ನಥ, ದೆಹಲಿ - ಜೈಸ್ಮಮೇರ್, ದೆಹಲಿ - ಬರೇಲಿ, ದೆಹಲಿ - ಮುಂಬೈ, ದೆಹಲಿ - ವಾರಾಣಾಸಿ, ದೆಹಲಿ - ಜೈಪುರ್ ಮತ್ತು ದೆಹಲಿ - ಗುವಾಹಟಿ ಸೇರಿದಂತೆ ಅನೇಕ ಮಾರ್ಗಗಳ ವಿಮಾನ ಪ್ರಯಾಣದಲ್ಲಿ ಅಡಚಣೆಯಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಚಳಿಗೆ ತತ್ತರಿಸಿರುವ ಉತ್ತರ ಭಾರತ: ಹೊಸ ವರ್ಷದ ಆಗಮನವಾಗುತ್ತಿದ್ದಂತೆ ದೆಹಲಿ ಸೇರಿದಂತೆ ಉತ್ತರ ಭಾರತದ ಅನೇಕ ಕಡೆ ಶೀತಗಾಳಿ ಹೆಚ್ಚಿದ್ದು, ಮುಂಜಾನೆ ಸಮಯದಲ್ಲಿ ದಟ್ಟ ಮಂಜು ಆವರಿಸುತ್ತಿದೆ. ಇನ್ನು ಈ ನಡುವೆ ಕಡಿಮೆ ಉಷ್ಣಾಂಶದಿಂದ ಜನರು ತತ್ತರಿಸುತ್ತಿದ್ದಾರೆ. ಸಫ್ದರ್ಜಂಗ್ನಲ್ಲಿ ಬೆಳಗ್ಗೆ 6.10ರ ಸುಮಾರಿಗೆ ಕನಿಷ್ಟ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಪಂಜಾಬ್, ವಾಯುವ್ಯ ರಾಜಸ್ಥಾನ, ಜಮ್ಮು ವಲಯ, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ತ್ರಿಪುರದಲ್ಲಿ ಭಾರೀ ಚಳಿ ಮತ್ತು ಮಂಜು ಕವಿದ ವಾತಾವರಣ ಇದೆ. ಪಂಜಾಬ್ನಿಂದ ಬಿಹಾರದವರೆಗೆ ದಟ್ಟ ಮಂಜು ಕವಿದ ವಾತಾವರಣ ಕಾಣಬಹುದಾಗಿದೆ ಎಂದು ಹವಾಮಾನ ಇಲಾಖೆ ಕೂಡ ಟ್ವೀಟ್ ಮಾಡಿದೆ. ಏನತ್ಮಧ್ಯೆ , ರೈಲು ಪ್ರಯಾಣ ಕೂಡ ವಿಳಂಬಗೊಂಡಿದೆ. ದಟ್ಟ ಮಂಜಿನ ಕಾರಣ 26 ರೈಲುಗಳ ಸಂಚಾರ ವಿಳಂಬವಾಗಲಿದೆ ಎಂದು ಉತ್ತರ ರೈಲ್ವೆ ತಿಳಿಸಿದೆ.