ಆಕಿವೀಡು (ಆಂಧ್ರಪ್ರದೇಶ):ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ಮತ್ತು ಅಜ್ಜನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಕಿವೀಡು ಮಂಡಲದ ಸಿದ್ದಾಪುರ ಗ್ರಾಮದಲ್ಲಿ ಜರುಗಿದೆ.
ಪೊಲೀಸರು ಮತ್ತು ಸ್ಥಳೀಯರ ಪ್ರಕಾರ, ಸಿದ್ದಾಪುರ ಗ್ರಾಮದಲ್ಲಿ ಮುಸ್ಲಿಂ ವೃದ್ಧ ದಂಪತಿ ವಾಸಿಸುತ್ತಿದ್ದಾರೆ. ವೃದ್ಧಯೊಬ್ಬರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏಲೂರಿನಲ್ಲಿ ನೆಲೆಸಿರುವ ದಂಪತಿಯ ಮಗಳು ಮತ್ತು ಮೊಮ್ಮಗಳು (20) ಇತ್ತೀಚೆಗೆ ಸಿದ್ದಾಪುರಕ್ಕೆ ಬಂದಿದ್ದರು. ಪ್ರೀತಿಯ ಹೆಸರಲ್ಲಿ ಯುವತಿಯನ್ನು ಹಿಂಬಾಲಿಸಿದ ಅದೇ ಗ್ರಾಮದ ನಿವಾಸಿ ಶೇಖ್ ಇಮ್ರಾನ್ ಮಂಗಳವಾರ ಬೆಳಿಗ್ಗೆ ಅವರ ಮನೆಗೆ ತೆರಳಿ ಹೊರಗೆ ಟೇಬಲ್ ಮೇಲೆ ಮಲಗಿದ್ದ ಯುವತಿಯ ಅಜ್ಜನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಿದ್ದಾನೆ.
ಆತನ ಕೂಗು ಕೇಳಿ ಮನೆಯಿಂದ ಹೊರಬಂದ ಯುವತಿಯ ತಾಯಿ ಮೇಲೂ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತನ್ನೊಂದಿಗೆ ಬರದಿದ್ದರೆ ನಿನ್ನ ಅಜ್ಜ ಮತ್ತು ತಾಯಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿ ಯವತಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವತಿಯ ಅಜ್ಜ ಹಾಗೂ ತಾಯಿ ಭೀಮಾವರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧನ ಸ್ಥಿತಿ ಚಿಂತಾಜನಕವಾಗಿದ್ದು, ಯುವತಿಯ ತಾಯಿ ತಲೆಗೆ ಸುಮಾರು 50 ಹೊಲಿಗೆಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.