ಬಂಡಾ(ಉತ್ತರ ಪ್ರದೇಶ): ಪ್ರತಿಯೊಂದು ದೇವರು, ಧಾರ್ಮಿಕತೆಯ ಮೇಲೆ ಜನ ವಿಶಿಷ್ಠವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಉತ್ತರ ಪ್ರದೇಶ ಬಂಡಾದಲ್ಲಿ ಪ್ರತಿ ಮಕರ ಸಂಕ್ರಾಂತಿಯಂದು ಜಾತ್ರೆ ನಡೆಯುತ್ತೆ. ಇದನ್ನು ಪ್ರೇಮಿಗಳ ಜಾತ್ರೆ ಎಂದೇ ಕರೆಯಲಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆಯನ್ನು ನೋಡಲು ದೂರದೂರುಗಳಿಂದ ನೂರಾರು ಮಂದಿ ಆಗಮಿಸುತ್ತಾರೆ.
ಬಂಡಾ ನಗರದ ಕೆನ್ ನದಿಯ ದಡದಲ್ಲಿರುವ ಭೂರಗಢ್ ಕೋಟೆಯಲ್ಲಿ ಎರಡು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಇಲ್ಲಿನ ನಟಾಬಲಿ ಬಾಬಾನ ದೇವಾಲಯ ಇದ್ದು, ಪ್ರೇಮಿಗಳು ಸೇರಿದಂತೆ ಸಾವಿರಾರು ಜನರು ನಟಾಬಲಿ ಬಾಬಾಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಯಾವುದೇ ಹರಕೆ ಹೊತ್ತರೂ ಈಡೇರುತ್ತೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಪ್ರೀತಿ ಬಯಸುವ ಮಂದಿಗೆ ತಮ್ಮ ಪ್ರೀತಿಯಲ್ಲಿ ಯಶಸ್ಸು ಕಾಣುತ್ತಾರಂತೆ. ಹೀಗಾಗಿ ನೂರಾರು ಪ್ರೇಮಿಗಳು ಜಾತ್ರೆಯ ದಿನದಂದು ಇಲ್ಲಿಗೆ ಭೇಟಿ ನೀಡುತ್ತಾರೆ.
ನೂರಾರು ವರ್ಷಗಳಿಂದ ಈ ಜಾತ್ರೆಯನ್ನು ನಿರಂತರವಾಗಿ ಆಯೋಜಿಸಲಾಗಿದೆ. ಈ ವೇಳೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಇಲ್ಲಿ ಭೂರಗಢ ಕೋಟೆಯ ಅಡಿ ನಿರ್ಮಿಸಲಾದ ನಟಾಬಲಿ ದೇವಾಲಯವು ಜನರ ನಂಬಿಕೆಯ ಕೇಂದ್ರವಾಗಿದೆ.
ಪ್ರೇಮಿಗಳ ಜಾತ್ರೆ ಹಿನ್ನೆಲೆ
ಸುಮಾರು 600 ವರ್ಷಗಳ ಹಿಂದೆ ಮಹೋಬಾ ಜಿಲ್ಲೆಯ ಸುಗಿರಾ ಪ್ರದೇಶದ ನಿವಾಸಿಯಾದ ಅರ್ಜುನ್ ಸಿಂಗ್ ಭುರಗಢ ಕೋಟೆಯ ರಾಜನಾಗಿದ್ದನು. ಇಲ್ಲಿಂದ ಸ್ವಲ್ಪ ದೂರದಲ್ಲಿ ಮಧ್ಯಪ್ರದೇಶದ ಸರ್ಬಾಯಿ ಪ್ರದೇಶದ ಬಿರಾನ್ ಎಂಬ ನಾಟ್ ಜಾತಿಯ 21 ವರ್ಷದ ಯುವಕ ಇಲ್ಲಿ ಸೇವಕನಾಗಿದ್ದನು. ಈತ ತಂತ್ರ - ಮಂತ್ರಗಳ ಬಗ್ಗೆ ಜ್ಞಾನ ಹೊಂದಿದ್ದ. ರಾಜನ ಮಗಳು ಈ ಬಿರಾನ್ ಅನ್ನು ಮೋಹಿಸಿ ಬಳಿಕ ಮದುವೆಯಾಗಲು ರಾಜನ ಮುಂದೆಯೇ ನಿರ್ಧರಿಸಿದ್ದಳಂತೆ.
ಇದಕ್ಕೆ ಒಪ್ಪಿದ ರಾಜಾ ಅರ್ಜುನ್ ಸಿಂಗ್ ಬಂಬೇಶ್ವರ ಪರ್ವತದಿಂದ ನದಿಯ ಸಮೀಪ ಇರುವ ಕೋಟೆಗೆ ನೂಲಿನ ದಾರದ ಹಗ್ಗವನ್ನು ಹತ್ತಿ ಕೋಟೆಗೆ ಬಂದರೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವ ಷರತ್ತು ಹಾಕಿದ್ದಾನೆ. ಇದಕ್ಕೆ ಒಪ್ಪಿಕೊಂಡ ಬಿರಾನ್ ನದಿ ಬದಿಯಲ್ಲಿರುವ ಬಂಬೇಶ್ವರ ಪರ್ವತದಿಂದ ಹತ್ತಿಯ ಹಗ್ಗದ ಸಹಾಯದಿಂದ ನದಿಯನ್ನು ದಾಟಿ ಕೋಟೆ ತಲುಪಲು ಮುಂದಾಗುತ್ತಾನೆ. ಆದರೆ, ಬಿರಾನ್ ಈ ಸಾಹಸ ಮಾಡುತ್ತಾನೆಂದು ರಾಜ ಅರ್ಜುನ್ ಸಿಂಗ್ ಹಗ್ಗವನ್ನು ಕತ್ತರಿಸುತ್ತಾನೆ. ಆಗ ಬಿರಾನ್ ಕೋಟೆಯ ಬಳಿ ಬಿದ್ದು ಸಾಯುತ್ತಾನೆ.
ಈ ಸುದ್ದಿ ತಿಳಿದ ರಾಜನ ಪುತ್ರಿ ಕೂಡ ಕೋಟೆಯಿಂದ ಹಾರಿ ಪ್ರಾಣ ಬಿಡುತ್ತಾಳೆ. ಬಳಿಕ ಪ್ರೇಮಿ ಬಿರಾನ್ ಮತ್ತು ರಾಜನ ಮಗಳ ಸಮಾಧಿಯನ್ನು ಇಲ್ಲಿ ನಿರ್ಮಿಸಲಾಯಿತು. ಅಂದಿನಿಂದ ಸಂಕ್ರಾಂತಿ ದಿನದಂದು ಇಲ್ಲಿಗೆ ಬಂದು ಪೂಜೆ ಸಲ್ಲಿಸುವುದರೊಂದಿಗೆ ಜಾತ್ರೆಯನ್ನು ಮಾಡುತ್ತಾ ಬರಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.