ಹೋಶಂಗಾಬಾದ್(ಮಧ್ಯಪ್ರದೇಶ):ಪರಸ್ಪರ ಪ್ರೀತಿಸುವ ಜೋಡಿಗಳಿಗೆ ಕುಟುಂಬದಿಂದ ಒಪ್ಪಿಗೆ ಸಿಗದೇ ಹೋದಾಗ ಅಥವಾ ಅವರಿಂದ ತೊಂದರೆಯಾಗುವುದು ಗೊತ್ತಾಗುತ್ತಿದ್ದಂತೆ ಓಡಿ ಹೋಗಿ ಮದುವೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಆದರೆ ಇಲ್ಲೊಂದು ಜೋಡಿ ಪೋಷಕರ ವಿರೋಧವಿದ್ದರೂ, ಅವರನ್ನು ಒಪ್ಪಿಸಿ ಪೊಲೀಸ್ ಠಾಣೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪೋಷಕರ ಮಧ್ಯಸ್ಥಿಕೆಯಲ್ಲೇ ಮದುವೆಯಾದ ಜೋಡಿ ಮಧ್ಯಪ್ರದೇಶದ ಹೋಶಂಗಾಬಾದ್ನಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಜತೆಗೆ ಇವರಿಗೆ ಮೇಲಿಂದ ಮೇಲೆ ತೊಂದರೆ ಸಹ ನೀಡಿದ್ದರು. ಇದಕ್ಕೆ ತಲೆಕೆಡಿಸಿಕೊಳ್ಳದ ಜೋಡಿ ಧೈರ್ಯ ಕಳೆದುಕೊಳ್ಳದೇ ಪರಸ್ಪರ ಒಪ್ಪಿಕೊಂಡು ಮದುವೆ ಮಾಡಲು ನಿರ್ಧಾರ ಮಾಡಿದ್ದರು.
ಇದನ್ನೂ ಓದಿ: 'ವೋಗ್'ನ ಮೊದಲ ಪುಟದಲ್ಲಿ ರಾರಾಜಿಸಿದ ಸೀತಾ ದೀದಿ! ಯಾರು ಈಕೆ?
ಇದರ ಮಧ್ಯೆ ಮಹಿಳೆ ಕುಟುಂಬಸ್ಥರು ಹುಡುಗನ ಮೇಲೆ ಹಲ್ಲೆ ನಡೆಸಿ, ಗಾಯಗೊಳಿಸಿದ್ದರು. ಇದರಿಂದ ದುರ್ಗೇಶ್ ಆಸ್ಪತ್ರೆಗೆ ದಾಖಲಾಗಿದ್ದನು. ಇಷ್ಟಾದ್ರೂ ತಾವು ಒಬ್ಬರನ್ನೊಬ್ಬರು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದಂತೆ ಇವರ ಅಚಲ ಪ್ರೀತಿಗೆ ಕುಟುಂಬದ ಸದಸ್ಯರು ಕೂಡ ಶರಣಾಗಿದ್ದು, ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ವಿವಾಹಕ್ಕೆ ಕುಟುಂಬ, ಸ್ನೇಹಿತರು ಹಾಗೂ ಪೊಲೀಸರು ಸಾಕ್ಷಿಯಾದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೊಲೀಸ್ ಠಾಣೆ ಉಸ್ತುವಾರಿ ಸಂಜಯ್ ಚೋಕ್ಸೆ, ಇಬ್ಬರು ವಯಸ್ಕರಾಗಿದ್ದು, ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿ ಮನೆಯವರಿಂದ ಇದಕ್ಕೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಹಲ್ಲೆ ನಡೆಸಿದ್ದರು. ಪೊಲೀಸರು ಇದರ ಬಗ್ಗೆ ಮನವರಿಕೆ ಮಾಡಿದ ಬಳಿಕ ಅವರು ಒಪ್ಪಿಕೊಂಡಿದ್ದು, ಇದೀಗ ಮದುವೆ ಮಾಡಿಸಲಾಗಿದೆ ಎಂದು ತಿಳಿಸಿದ್ದಾರೆ.