ಲಖನೌ(ಉತ್ತರಪ್ರದೇಶ):ಕಳೆದ ಎರಡು ವರ್ಷಗಳಿಂದ ಯುವಕನೊಬ್ಬ ವಿದ್ಯಾರ್ಥಿನಿ ಮೇಲೆ ಮದುವೆಯಾಗುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದು, ನಿರಾಕರಿಸಿದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಓದನ್ನು ಬಿಟ್ಟು ಮನೆಗೆ ಬಂದಿಳಿದಿದ್ದಾಳೆ. ಯುವಕನ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?: ಸಂತ್ರಸ್ತ ವಿದ್ಯಾರ್ಥಿನಿ ಅಲಿಗಂಜ್ ನಿವಾಸಿಯಾಗಿದ್ದು NEETಗೆ ತಯಾರಿ ಮಾಡುತ್ತಿದ್ದಾರೆ. ಈ ವೇಳೆ ಯುವಕನೊಬ್ಬನಿಂದ ತಮಗೆ ಕಿರುಕುಳ ಆಗುತ್ತಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ಠಾಣೆಗೆ ಬಂದು ವಿದ್ಯಾರ್ಥಿ ಸೈಯದ್ ಸಿಜಾನ್ ವಿರುದ್ಧ ಲಿಖಿತ ದೂರು ನೀಡಿದ್ದಾಳೆ. ಸೈಯದ್ ಸಿಜಾನ್ ಎರಡು ವರ್ಷಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿದ್ದಾಗ, ಈ ದೂರುದಾರೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು ಎನ್ನಲಾಗಿದೆ. ಅಂದಿನಿಂದ ಸೈಯದ್ ಆಕೆಗೆ ಸ್ನೇಹಿತರಾಗುವಂತೆ ಒತ್ತಡ ಹೇರುತ್ತಿದ್ದನಂತೆ. ಈ ಅವಧಿಯಲ್ಲಿ ಹಲವು ಬಾರಿ ಕಿರುಕುಳ ನೀಡಿದ್ದರೂ ವಿದ್ಯಾರ್ಥಿನಿ ಕಡೆಗಣಿಸುತ್ತಲೇ ಇದ್ದಳು. ಸ್ವಲ್ಪ ಸಮಯದ ನಂತರ, ಆರೋಪಿ ಬಹಿರಂಗವಾಗಿ ಅವಳನ್ನ ಹಿಂಬಾಲಿಸಿ ಕಾಟ ಕೊಡಲು ಆರಂಭಿಸಿದ್ದನಂತೆ, ಆಗ ಅವಳು ಪ್ರತಿಭಟಿಸಿದ್ದಾಳೆ. ಆದರೂ ಬಿಡದ ಆರೋಪಿ ಮದುವೆ ಆಗುವಂತೆ ವಿದ್ಯಾರ್ಥಿನಿಯನ್ನು ಒತ್ತಾಯಿಸಲು ಪ್ರಾರಂಭಿಸಿದ್ದ. ಅವಳು ನಿರಾಕರಿಸಿದ ಮೇಲೆ ಆ್ಯಸಿಡ್ ಎಸೆಯುವುದಾಗಿ ಬೆದರಿಕೆ ಹಾಕಿದ್ದಾನೆ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.