ಕರೂರ್ (ತಮಿಳುನಾಡು):ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಪರ ಪ್ರಚಾರ ಕಾರ್ಯ ಕೈಗೊಂಡಿರುವ ನಟಿ ನಮಿತಾ, ತಮಿಳುನಾಡಲ್ಲಿ ಕಮಲ ಅರಳಲಿದೆ, ರಾಜ್ಯ ಬೆಳೆಯಲಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಇಂದು ರೋಡ್ ಶೋ ನಡೆಸಿದ ಬಿಜೆಪಿ ಸದಸ್ಯೆ ನಮಿತಾ, ಅರವಕುರಿಚಿ ಕ್ಷೇತ್ರವು ಬರಡಾಗಿದ್ದು, ಈ ಸ್ಥಳವನ್ನು ಹಸಿರಾಗಿ ಪರಿವರ್ತಿಸಲು ಅಣ್ಣಾಮಲೈಗೆ ಮತ ಹಾಕಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದು, ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕಿದೆ ಎಂದರು.
ಅಣ್ಣಾಮಲೈ ಪರ ನಟಿ ನಮಿತಾ ಮತಬೇಟೆ ಹೆಚ್ಚಿನ ಓದಿಗೆ:ತಮಿಳುನಾಡು ವಿಧಾನಸಭೆ ಫೈಟ್: ಅಣ್ಣಾಮಲೈಗೆ ಬಿಜೆಪಿ ಟಿಕೆಟ್!
ರೋಡ್ ಶೋ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಮಿತಾ, ಅಣ್ಣಾಮಲೈ ಈ ಹಿಂದೆ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಖಂಡಿತವಾಗಿಯೂ ಅರವಕುರಿಚಿ ಕ್ಷೇತ್ರಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಅವರು ಮುಂದೆ ಸಿಂಹದಂತೆ ಘರ್ಜಿಸಲಿದ್ದಾರೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಎಂಕೆ - ಕಾಂಗ್ರೆಸ್ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ. ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.