ತಿರುವನಂತಪುರಂ (ಕೇರಳ):ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆ 2022 ನೇ ಸಾಲಿನ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಕೇರಳದ ತಿರುವನಂತಪುರಂ ನಿವಾಸಿ ಅಖಿಲಾ ಬಿ.ಎಸ್ ಎಂಬವರು ತಮ್ಮ ಐದನೇ ವಯಸ್ಸಿನಲ್ಲಿ ಬಸ್ ಅಪಘಾತದಲ್ಲಿ ತನ್ನ ಬಲಗೈಯನ್ನು ಕಳೆದುಕೊಂಡಿದ್ದ ಯುವತಿ ಇದೀಗ ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆಯಲ್ಲಿ 760ನೇ ಸ್ಥಾನ ಪಡೆದುಕೊಂಡಿದ್ದಾರೆ.
ಸೆಪ್ಟಂಬರ್ 11, 2000 ರಂದು ಅಪಘಾತಕ್ಕೊಳಗಾದ ಅಖಿಲ ಅವರು ತಮ್ಮ ಬಲಗೈಯನ್ನು ಕಳೆದುಕೊಂಡರು, ಅದರ ನಂತರ ಅಖಿಲಾ ಅವರು ತಮ್ಮ ಎಡಗೈ ನಿಂದ ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು ಮತ್ತು ಎಡಗೈನಿಂದಲೇ ಬರೆಯಲು ಅಭ್ಯಾಸ ಮಾಡಿಕೊಂಡರು. ಬೋರ್ಡ್ ಎಕ್ಸಾಂನಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಅವರು ಐಐಟಿ ಮದ್ರಾಸ್ನಲ್ಲಿ ಇಂಟಿಗ್ರೇಟೆಡ್ ಎಂ.ಎ ಪದವಿ ಶಿಕ್ಷಣ ಪೂರ್ಣಗೊಳಿಸಿದ ನಂತರ ಯುಪಿಎಸ್‌ಸಿ ಪರೀಕ್ಷೆ ಬರೆಯಲು ತಯಾರಿ ಆರಂಭಿಸಿದ್ದರು.
ಮೊದಲ ಎರಡು ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ತೇರ್ಗಡೆಯಾಗಿದ್ದ ಅಖಿಲ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ನನ್ನ ಶಿಕ್ಷಕರೊಬ್ಬರು ಕಲೆಕ್ಟರ್ ವೃತ್ತಿಯ ಬಗ್ಗೆ ವಿವರಿಸಿದ್ದರು ಮತ್ತು ಯುಪಿಎಸ್‌ಸಿ ಪರೀಕ್ಷೆಗೆ ತಯಾರುಗುವಂತೆ ಪ್ರೇರೇಪಿಸಿದ್ದರು. 2019 ರಲ್ಲಿ ಪದವಿ ಮುಗಿಸಿದ ನಂತರ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಒಂದು ವರ್ಷ ಬೆಂಗಳೂರಿನ ಇನ್ಸ್ಟಿಟ್ಯೂಟ್ ಒಂದರಲ್ಲಿ ತರಬೇತಿ ಪಡೆದು, ನಂತರ ನಾನು ಕೇರಳಕ್ಕೆ ಹಿಂತಿರುಗಿ ತಿರುವನಂತಪುರಂ ಮೂಲದ ಸಂಸ್ಥೆಯಿಂದ ಓದಲು ಸಹಾಯ ಪಡೆದುಕೊಂಡೆ" ಎಂದು ಹೇಳಿದರು. ಇದಕ್ಕಿಂತ ಮುಂಚೆ 2020 ಮತ್ತು 2021ರಲ್ಲಿ ಪ್ರಿಲಿಮ್ಸ್ನಲ್ಲಿ ಪಾಸ್ ಆಗಿದ್ದೆ. ಆದರೆ ಮೇನ್ಸ್ ಪರೀಕ್ಷೆಗೆ ಆಯ್ಕೆಯಾಗಿರಲಿಲ್ಲ ಎಂದು ತಿಳಿಸಿದರು.