ಉಧಾಂಪುರ (ಶ್ರೀನಗರ): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಡಾ.ಫಾರೂಕ್ ಅಬ್ದುಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಪಕ್ಷವು ಕೇವಲ ಮತಕ್ಕಾಗಿ ಶ್ರೀರಾಮನ ಹೆಸರು ಬಳಸುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಉಳಿಯಲು ಮಾತ್ರ ರಾಮನ ಹೆಸರನ್ನು ಬಳಕೆ ಮಾಡುತ್ತಿದೆ. ಆದರೆ ರಾಮ ಕೇವಲ ಹಿಂದೂಗಳ ದೇವರಲ್ಲ ಎಂದರು.
ಗುರುವಾರ ಪ್ಯಾಂಥರ್ಸ್ ಪಾರ್ಟಿ ಆಯೋಜಿಸಿದ್ದ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಾ, ಭಗವಾನ್ ಶ್ರೀರಾಮ ಕೇವಲ ಹಿಂದೂಗಳ ದೇವರಲ್ಲ. ದಯವಿಟ್ಟು ನಿಮ್ಮ ಮನಸ್ಸಿನಿಂದ ಈ ಕಲ್ಪನೆಯನ್ನು ತೆಗೆದುಹಾಕಿ. ಭಗವಾನ್ ಶ್ರೀರಾಮ ಪ್ರತಿಯೊಬ್ಬರ ದೇವರು. ಅದು ಮುಸ್ಲಿಂ ಆಗಿರಬಹುದು, ಕ್ರಿಶ್ಚಿಯನ್ ಆಗಿರಬಹುದು, ಅಮೆರಿಕನ್ ಅಥವಾ ರಷ್ಯನ್ ಆಗಿರಬಹುದು, ರಾಮನಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರಿಗೂ ಆತ ದೇವರೇ ಎಂದು ನುಡಿದರು. ರಾಮನ ಹೆಸರು ಹೇಳಿಕೊಂಡು ಬರುವವರು ಮೂರ್ಖರು. ಅವರು ರಾಮನ ಹೆಸರಲ್ಲಿ ಲಾಭ ಪಡೆಯಲು ಬಯಸುತ್ತಿದ್ದಾರೆ. ಅವರಿಗೆ ರಾಮನ ಮೇಲೆ ಪ್ರೀತಿ ಇಲ್ಲ, ಬದಲಿಗೆ ಅಧಿಕಾರದ ಮೇಲೆ ಪ್ರೀತಿ ಇದೆ ಎಂದು ಹರಿಹಾಯ್ದರು.