ಪ್ರಯಾಗರಾಜ್: (ಉತ್ತರ ಪ್ರದೇಶ):ಹತ್ಯೆಯಾದ ದರೋಡೆಕೋರ ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅವರ ಆಪ್ತ ಸಹಾಯಕರಾದ ಬಾಂಬರ್ ಗುಡ್ಡು ಮುಸ್ಲಿಂ ಮತ್ತು ಸಬೀರ್ ಎಂಬುವರ ವಿರುದ್ಧ ಪ್ರಯಾಗರಾಜ್ ಪೊಲೀಸರು ಲುಕ್ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಮೇಶ್ ಪಾಲ್ ಬಳಿಕ ಶೈಸ್ತಾ ಮತ್ತು ಈ ತಂಡ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧನೆ ನಡೆಸಿದ್ದಾರೆ. ಅಲ್ಲದೇ ಅವರ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಘೋಷಿಸಿದ್ದು, ಇದರ ಬೆನ್ನಲ್ಲೇ ಈ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಸಬೀರ್ ತಲೆಗೂ ಕೂಡ ಪೊಲೀಸರು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಸದ್ಯ ಶೈಸ್ತಾ ಪರ್ವೀನ್ ಮತ್ತು ಅವರ ತಂಡ ನಿತ್ಯವೂ ತಾವು ಉಳಿದುಕೊಳ್ಳುವ ಸ್ಥಳವನ್ನು ಬದಲಾಯಿಸುತ್ತಾ ಬರುತ್ತಿದ್ದಾರೆ. ಇದೇ ಕಾರಣಕ್ಕೆ ಅವರ ಅಡಗುತಾಣಗಳ ಬಗ್ಗೆ ಸಕಾಲಕ್ಕೆ ಮಾಹಿತಿ ಸಿಗುತ್ತಿಲ್ಲ. ಅವರ ಇರುವಿಕೆ ಬಗ್ಗೆ ಪೊಲೀಸರು ಸಹ ಶೋಧನೆ ನಡೆಸಿದ್ದಾರೆ. ಮಾಹಿತಿ ಪ್ರಕಾರ ಅವರು ದೇಶ ತೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪೊಲೀಸರು ಈ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಈ ತಂಡ ಮೂವರ ಪಾಸ್ ಪೋರ್ಟ್ಗಳು ಯಾವಾಗ ಮತ್ತು ಯಾವ ಹೆಸರಿನಲ್ಲಿ ತಯಾರಿಸಲಾಗಿದೆ ಎಂಬುದು ಗೊತ್ತಾಗಿದ್ದು, ದೇಶ ತೊರೆಯದಂತೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈ ಲುಕ್ ಔಟ್ ನೋಟಿಸ್ ಅವಧಿ 1 ವರ್ಷವಿದ್ದು ಎಲ್ಲ ಚೆಕ್‌ಪೋಸ್ಟ್‌ಗಳಿಗೆ ಕಳುಹಿಸಲಾಗಿದೆ.