2022 ರಲ್ಲಿ ನಡೆದ ಹಲವು ಘಟನೆಗಳು ದೇಶವನ್ನು ಬೆಚ್ಚಿಬೀಳಿಸಿವೆ. ಇದಕ್ಕೆ ಹಲವು ನಿದರ್ಶನಗಳಿವೆ. ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಎಂಬವರನ್ನು ಇಬ್ಬರು ದುಷ್ಕರ್ಮಿಗಳು ಶಿರಚ್ಛೇದನ ಮಾಡಿ ಅಟ್ಟಹಾಸ ಮೆರೆದಿದ್ದರು. ತನ್ನ ಗೆಳೆಯನಿಂದ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಶ್ರದ್ಧಾ ವಾಕರ್ ಹತ್ಯೆ ಇಡೀ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಕೇರಳದಲ್ಲಿ ದೇಹದ ಭಾಗಗಳನ್ನು ಕತ್ತರಿಸಿ ಸೇವಿಸಿದ ಘಟನೆ, ಪ್ರವಾದಿ ವಿರುದ್ಧ ಬಿಜೆಪಿ ನಾಯಕಿಯ ವಿವಾದಾತ್ಮಕ ಹೇಳಿಕೆಯಿಂದ ಉಂಟಾದ ಗಲಭೆ, ಕೊಯಮತ್ತೂರು ಮತ್ತು ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣಗಳು, ಪಂಜಾಬಿ ಗಾಯಕನ ಕೊಲೆ ಪ್ರಕರಣ ಹಾಗು 2022ರಲ್ಲಿ ನಡೆದ ಪ್ರಮುಖ ಅಪರಾಧ ಘಟನಾವಳಿಗಳಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ)ದ ಪ್ರಕಾರ, 2021 ರಲ್ಲಿ ಭಾರತವು ಪ್ರತಿದಿನ ಸರಾಸರಿ 86 ಅತ್ಯಾಚಾರ ಪ್ರಕರಣ ಮತ್ತು ಪ್ರತಿ ಗಂಟೆಗೆ ಮಹಿಳೆಯರ ವಿರುದ್ಧ 49 ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಿದೆ.
ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ: ಅಫ್ತಾಬ್ ಪೂನಾವಾಲಾನನ್ನು ತನ್ನ ಜೊತೆಗೆ ಸಹಜೀವನ ನಡೆಸುತ್ತಿದ್ದ ಶ್ರದ್ಧಾ ವಾಕರ್ನನ್ನು ಕ್ರೂರವಾಗಿ ಕೊಂದಿದ್ದಕ್ಕಾಗಿ ಬಂಧಿಸಲಾಯಿತು. ಅಫ್ತಾಬ್ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ದೇಹದ ಭಾಗಗಳನ್ನು 35 ತುಂಡುಗಳನ್ನಾಗಿ ಮಾಡಿ ಫ್ರೀಜರ್ನಲ್ಲಿಟ್ಟಿದ್ದನು. ಬಳಿಕ ದೇಹದ ಭಾಗಗಳನ್ನು ದೆಹಲಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದನು. ಶ್ರದ್ಧಾ ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದರಿಂದ ಹತ್ಯೆ ಬೆಳಕಿಗೆ ಬಂದಿತ್ತು.
ಆರ್ಥಿಕ ಅಭಿವೃದ್ಧಿಗೆ ಕೇರಳದಲ್ಲಿ ನರಬಲಿ:ಆರ್ಥಿಕ ಏಳಿಗೆಗಾಗಿ ಕೇರಳದಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಿರುವ ಘಟನೆ ವರದಿಯಾಗಿತ್ತು. ಇಲ್ಲಿನ ದಂಪತಿ ತ್ವರಿತವಾಗಿ ಶ್ರೀಮಂತರಾಗಲು ಇಬ್ಬರು ಮಹಿಳೆಯರನ್ನು ನರಬಲಿ ನೀಡಿದ್ದರು. ಮೃತ ಮಹಿಳೆಯರನ್ನು ರೋಸೆಲಿನ್ ಮತ್ತು ಪದ್ಮಾ ಎಂದು ಗುರುತಿಸಲಾಗಿತ್ತು.
ಇವರನ್ನು ಕತ್ತು ಹಿಸುಕಿ ಸಾಯಿಸುವ ಮೊದಲು ಕಟ್ಟಿಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ಅವರ ಸ್ತನಗಳನ್ನು ಕತ್ತರಿಸಲಾಗಿತ್ತು. ಇವರಲ್ಲಿ ಒಬ್ಬರ ದೇಹವನ್ನು 56 ತುಂಡುಗಳಾಗಿ ಕತ್ತರಿಸಿ, ಮೂರು ಗುಂಡಿಗಳಲ್ಲಿ ಹೂತು ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಮೃತ ಹಸಿ ಮಾಂಸವನ್ನು ತಿಂದಿರುವುದಾಗಿ ವರದಿಯಾಗಿತ್ತು. ಘಟನೆಯ ಪ್ರಮುಖ ಆರೋಪಿಗಳಾದ ಮಹಮ್ಮದ್ ಶಾಫಿ, ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಉದಯಪುರದಲ್ಲಿ ಟೈಲರ್ ಶಿರಚ್ಛೇದನ: ಪ್ರವಾದಿಯನ್ನು ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಉದಯಪುರ ಎಂಬಲ್ಲಿ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯಾ ಲಾಲ್ ಎಂಬವರನ್ನು ಶಿರಚ್ಛೇದನ ಮಾಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಘೌಸ್ ಮೊಹಮ್ಮದ್ ಎಂಬವರನ್ನು ಬಂಧಿಸಿದ್ದರು. ಆರೋಪಿಗಳು ಹತ್ಯೆ ಮಾಡುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ಈ ಹತ್ಯೆ ಮಾಡಲಾಗಿದೆ ಆರೋಪಿಗಳು ಹೇಳಿಕೆ ನೀಡಿದ್ದರು.
ಅಲ್ಲದೇ ವಿವಾದಾತ್ಮಕ ಹೇಳಿಕೆಗಾಗಿ ಪಕ್ಷದಿಂದ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಹಲವು ವಲಯಗಳಲ್ಲಿ ಬೆಂಬಲ ವ್ಯಕ್ತವಾಗಿತ್ತು. ಅಂತೆಯೇ ಕನ್ಹಯ್ಯಾ ಲಾಲ್ ಅವರೂ ನೂಪುರ್ ಶರ್ಮ ಹೇಳಿಕೆ ಬೆಂಬಲವಾಗಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದರು. ಇದು ಕೊಲೆಯಲ್ಲಿ ಅಂತ್ಯ ಗೊಂಡಿತ್ತು.
ಪಂಜಾಬಿ ಗಾಯಕ ಸಿಧು ಮೂಸೇವಾಲಾ ಗುಂಡಿಕ್ಕಿ ಹತ್ಯೆ: ಮೇ 29 ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಇವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿತ್ತು. ಈ ಘಟನೆ ನಡೆಯುವ ಹಿಂದಿನ ದಿನ ಇವರ ಭದ್ರತೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಇದರ ಲಾಭವನ್ನು ಪಡೆದ ಶೂಟರ್‌ಗಳು ಮೂಸೇವಾಲ ವಾಹನದ ಮೇಲೆ ಗುಂಡಿನ ಮಳೆಗರೆದಿದ್ದರಿಂದ ಮೂಸೇವಾಲ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಕೊಲೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಕೆನಡಾ ಮೂಲದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದರು. ಯುವ ಅಕಾಲಿ ನಾಯಕ ಮಿದ್ದುಖೇರಾ 2021 ರಲ್ಲಿ ಕೊಲ್ಲಲ್ಪಟ್ಟಿದನು. ಈತನ ಹತ್ಯೆಯಲ್ಲಿ ಮೂಸೇವಾಲಾ ಅವರ ಮ್ಯಾನೇಜರ್ ಆದ ಶಗನ್‌ಪ್ರೀತ್ ಸಿಂಗ್ ಹೆಸರು ಕೇಳಿಬಂದಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಬ್ರಾರ್ ಮೂಸೇವಾಲನ ಹತ್ಯೆಗೆ ಯೋಜನೆ ರೂಪಿಸಿದ್ದ ಎಂದು ತಿಳಿದುಬಂದಿದೆ.