ನವದೆಹಲಿ :ಲೋಕಸಭೆಯ ಅಧಿವೇಶನವನ್ನು ನೇರವಾಗಿ ವೀಕ್ಷಿಸಲು ಅಭಿವೃದ್ಧಿ ಪಡಿಸಿದ್ದ ವಿಶೇಷ ಆ್ಯಪ್ ಅನ್ನು ಸ್ಪೀಕರ್ ಓಂ ಬಿರ್ಲಾ ಇಂದು ಲೋಕಸಭೆಯಲ್ಲಿ ಬಿಡುಗಡೆ ಮಾಡಿದ್ದಾರೆ. ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ನಡೆಯುತ್ತಿದ್ದ ಪ್ರಶ್ನೋತ್ತರ ಕಲಾಪದಲ್ಲಿ ಸ್ಪೀಕರ್ ‘ಎಲ್‌ಎಸ್ ಮೆಂಬರ್ ಆ್ಯಪ್’ ಅನ್ನು ಪರಿಚಯಿಸಿ, ಈ ಆ್ಯಪ್ ಅನ್ನು ಎಲ್ಲಾ ಸದಸ್ಯರು ಡೌನ್‌ಲೋಡ್ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಕ್ಷೇತ್ರದ ಜನತೆಗೂ ಆ್ಯಪ್ ಸೌಲಭ್ಯ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು.
ಸಂಸತ್ತಿನ ಅಧಿವೇಶನಗಳನ್ನು ಲೈವ್ ಆಗಿ ವೀಕ್ಷಿಸಲು ಅಪ್ಲಿಕೇಶನ್‌ವೊಂದನ್ನು ವಿನ್ಯಾಸಗೊಳಿಸಲಾಗಿದೆ. ಕಲಾಪದ ವೇಳೆ ನಡೆಯುವ ಚರ್ಚೆಗಳು, ಪ್ರಶ್ನೆಗಳು ಹಾಗೂ ಬುಲೆಟಿನ್‌ಗಳು ಸೇರಿದಂತೆ ಸದಸ್ಯರ ಮಾಹಿತಿ ಆ್ಯಪ್‌ನಲ್ಲಿ ವೀಕ್ಷಿಸಬಹುದು. ಪ್ರಮುಖ ಸಂಸದೀಯ ಪತ್ರಿಕೆಗಳು ಹಾಗೂ ವಿವಿಧ ಸಮಿತಿಗಳ ವರದಿಗಳನ್ನು ಅಪ್ಲಿಕೇಶನ್‌ನಲ್ಲಿ ನೋಡಬಹುದು ಎಂದು ತಿಳಿಸಿದ್ದಾರೆ.