ನವದೆಹಲಿ: ಬಜೆಟ್ ಅಧಿವೇಶನದ ಎರಡನೇ ಹಂತದ ಅಂತಿಮ ದಿನವಾದ ಇಂದು ಲೋಕಸಭೆ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಲ್ಪಟ್ಟಿದೆ. ವಿಪಕ್ಷಗಳ ಗದ್ದಲಗಳಿಂದಾಗಿ ಅಧಿವೇಶನ ಕೇವಲ 45 ಗಂಟೆ 55 ನಿಮಿಷಗಳ ಕಾಲ ನಡೆಯಿತು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ. ಅದಾನಿ ವಿವಾದದ ಕುರಿತಂತೆ ಜಂಟಿ ಸಂಸದೀಯ ಮಂಡಳಿಯ ತನಿಖೆಗೆ ಒತ್ತಾಯಿಸಿ ವಿಪಕ್ಷಗಳು ಧರಣಿ ನಡೆಸಿದ್ದರಿಂದ ಅಧಿವೇಶನವನ್ನು ಮುಂದೂಡಲಾಗಿದೆ.
ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಅಧಿವೇಶನದಲ್ಲಿ ನಡೆದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, 17ನೇ ಲೋಕಸಭೆಯ 11ನೇ ಬಜೆಟ್ ಅಧಿವೇಶನದಲ್ಲಿ ಸದನವು 25 ಅಧಿವೇಶನಗಳನ್ನು ನಡೆಸಿದ್ದು, ಸುಮಾರು 45 ಗಂಟೆ 55 ನಿಮಿಷಗಳ ಕಾಲ ನಡೆದಿದೆ ಎಂದು ತಿಳಿಸಿದರು.
ಕಳೆದ ಜನವರಿ 31ರಂದು ಲೋಕಸಭೆ ಅಧಿವೇಶನ ಆರಂಭವಾಗಿದ್ದು, ಅದೇ ದಿನ ಉಭಯ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಿದ್ದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸದನದಲ್ಲಿ 13 ಗಂಟೆ 44 ನಿಮಿಷಗಳ ಕಾಲ ಚರ್ಚೆ ನಡೆದಿದ್ದು, 143 ಸಂಸದರು ಭಾಗವಹಿಸಿದ್ದರು.
ಫೆಬ್ರವರಿ 1 ರಂದು 2023-24ರ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸದನದಲ್ಲಿ ಮಂಡಿಸಿದ್ದರು. ಈ ಬಗ್ಗೆ ಸದನದಲ್ಲಿ ಸುಮಾರು 14 ಗಂಟೆ 45 ನಿಮಿಷಗಳ ಕಾಲ ಸಾಮಾನ್ಯ ಚರ್ಚೆ ನಡೆದಿದೆ. ಇದರಲ್ಲಿ 145 ಸಂಸದರು ಭಾಗವಹಿಸಿದ್ದರು ಎಂದು ತಿಳಿಸಿದರು. ಕಲಾಪದಲ್ಲಿ ಒಟ್ಟು ಎಂಟು ಸರ್ಕಾರಿ ಮಸೂದೆಗಳನ್ನು ಮಂಡಿಸಲಾಗಿದೆ. ಇದರಲ್ಲಿ ಆರು ಮಸೂದೆಗಳನ್ನು ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ಈ ಸಂಬಂಧದ 29 ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
ಪ್ರಶ್ನೋತ್ತರ ಅವಧಿಯ ನಂತರ ಒಟ್ಟು 133 ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಸದಸ್ಯರು ಪ್ರಸ್ತಾಪಿಸಿದ್ದಾರೆ. 377 ನಿಯಮದ ಅಡಿಯಲ್ಲಿ ಒಟ್ಟು 436 ವಿಷಯಗಳನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗಿತ್ತು. ಲೋಕಸಭೆಯ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗಳು ಒಟ್ಟು 62 ವರದಿಗಳನ್ನು ಮಂಡಿಸಿವೆ. ಮಾರ್ಚ್ 23ರಂದು ಕೇಂದ್ರ ಸರ್ಕಾರದ ಸಚಿವಾಲಯಗಳು ಇಟ್ಟಿರುವ 2023-24ನೇ ಹಣಕಾಸು ವರ್ಷದ ಅನುದಾನದ ಬೇಡಿಕೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದಕ್ಕೆ ಪೂರಕವಾದ ಧನಸಹಾಯ ಮಸೂದೆಯನ್ನು ಅಂಗೀಕರಿಸಿ, ಹಣಕಾಸು ವಿಧೇಯಕವನ್ನು ಸದನದಲ್ಲಿ ಅಂಗೀಕರಿಸಲಾಗಿದೆ.
ಅಧಿವೇಶನ ನಡೆಸಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ವಿವಿಧ ಪಕ್ಷಗಳ ನಾಯಕರು ಮತ್ತು ಸಂಸದರಿಗೆ ಸ್ಪೀಕರ್ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಅಧಿವೇಶನದಲ್ಲಿ ಗದ್ದಲ ನಡೆಸಿದ ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ನಡವಳಿಕೆ ಸಂಸತ್ತಿಗೆ ಮತ್ತು ದೇಶಕ್ಕೆ ಪ್ರಯೋಜನಕಾರಿಯಲ್ಲ. ಇದು ಸದನಕ್ಕೆ ಮತ್ತು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸರಿಹೊಂದುವುದಿಲ್ಲ. ಯೋಜಿತ ರೀತಿಯಲ್ಲಿ ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ :ದೆಹಲಿ ವಿಧಾನಸಭೆ: ಶೇ 33ಕ್ಕಿಂತ ಹೆಚ್ಚು ಎಎಪಿ ಶಾಸಕರು ಓದಿದ್ದು ಕೇವಲ ಪಿಯುಸಿ!