ಕರ್ನಾಟಕ

karnataka

ETV Bharat / bharat

ಭದ್ರತಾ ಲೋಪ ಪ್ರಕರಣ; ಪ್ರತಿಪಕ್ಷಗಳಿಂದ ಕೋಲಾಹಲ, ಸಂಸತ್​ ಭದ್ರತಾ ತಂಡದ 8 ಸಿಬ್ಬಂದಿ ಅಮಾನತು - ಲೋಕಸಭೆ ಕಲಾಪ ಆರಂಭ

Parliament security breach: ಸಂಸತ್ತಿನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಸಂಸತ್ತಿನ ಭದ್ರತಾ ಲೋಪ ಕುರಿತು ಗದ್ದಲ ಎಬ್ಬಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

suspends 8 personnel  Lok Sabha secretariat  Parliament security breach  ಸಂಸತ್ತಿನ ಭದ್ರತಾ ಲೋಪ ಪ್ರಕರಣ  ಭದ್ರತಾ ತಂಡದ 8 ಸಿಬ್ಬಂದಿ ಅಮಾನತು  ಲೋಕಸಭೆ ಕಲಾಪ ಆರಂಭ  ಭದ್ರತಾ ಲೋಪ ಕುರಿತು ಗದ್ದಲ
ಸಂಸತ್ತಿನ ಭದ್ರತಾ ಲೋಪ ಪ್ರಕರಣ

By PTI

Published : Dec 14, 2023, 12:04 PM IST

Updated : Dec 14, 2023, 1:19 PM IST

ನವದೆಹಲಿ:ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಂಸತ್ತಿನ ಭದ್ರತಾ ತಂಡದ 8 ಜನರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಕಗಳು ತಿಳಿಸಿವೆ. ಲೋಕಸಭೆ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮತ್ತೆ ಮುಂದೂಡಲಾಗಿದೆ. ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಸಂಸತ್ತಿನ ಭದ್ರತಾ ಲೋಪ ಕುರಿತು ಗದ್ದಲ ಎಬ್ಬಿಸಲಾರಂಭಿಸಿದವು. ಈ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಶಾಂತಿಯನ್ನು ಕಾಪಾಡುವಂತೆ ವಿರೋಧ ಪಕ್ಷದ ಸಂಸದರನ್ನು ಕೋರಿದರು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ನಿನ್ನೆಯ ಘಟನೆಯಿಂದ ನಾವೆಲ್ಲರೂ ಚಿಂತಿತರಾಗಿದ್ದೇವೆ. ಭದ್ರತೆಯ ಜವಾಬ್ದಾರಿ ಲೋಕಸಭೆ ಸಚಿವಾಲಯದ ಮೇಲಿದೆ ಎಂದು ಹೇಳಿದರು.

ಇಂದು ಲೋಕಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಸಬಾರದು. ಹಳೆ ಸಂಸತ್ತಿನಲ್ಲೂ ಇಂತಹ ಘಟನೆಗಳು ನಡೆದಿವೆ. ಎಲ್ಲರೂ ಒಟ್ಟಾಗಿ ಘಟನೆಯನ್ನು ಖಂಡಿಸಬೇಕು. ಅರಾಜಕತಾವಾದಿಗಳಿಗೆ ಪಾಸ್ ನೀಡಬಾರದು. ಈ ಹಿಂದೆ ಹಳೆ ಸಂಸತ್​ ಭವನದಲ್ಲಿ ಪೆಪ್ಪರ್ ಸ್ಪ್ರೇ ದಾಳಿಗಳು ನಡೆದಿವೆ ಎಂಬುದನ್ನು ನೆನಪಿಸಿದರು. ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಗದ್ದಲದಿಂದಾಗಿ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಡಿಸೆಂಬರ್ 13 ರಂದು ಬುಧವಾರ ಸಂಸತ್ತಿನಲ್ಲಿ ಭಾರೀ ಭದ್ರತಾ ಉಲ್ಲಂಘನೆಯ ನಂತರ ಐದು ಜನರನ್ನು ಬಂಧಿಸಲಾಗಿದೆ. ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಆಗುಂತಕರು ಒಳನುಗ್ಗಿದ್ದರು. ಈ ವೇಳೆ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು. ಸಂಸತ್ತಿನ ಒಳಗೆ ಮತ್ತು ಹೊರಗೆ ಘೋಷಣೆಗಳನ್ನು ಕೂಗಿದರು. ಇದಾದ ತಕ್ಷಣ ಲೋಕಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರ ಅಗರ್ವಾಲ್ ಅವರು ಅಧಿವೇಶನವನ್ನು ಮುಂದೂಡಿದರು. ಈ ಸಂಪೂರ್ಣ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಗೃಹ ಸಚಿವಾಲಯ ವಹಿಸಿಕೊಂಡಿದೆ. ಇದಲ್ಲದೆ, ದೆಹಲಿ ಪೊಲೀಸರು 200 ಅಧಿಕಾರಿಗಳ ತಂಡವನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ 20 ಇನ್ಸ್‌ಪೆಕ್ಟರ್‌ಗಳು ಸೇರಿದ್ದಾರೆ. ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಬುಧವಾರ ಸಂಸತ್ತಿನ ಕೆಳಮನೆಯಲ್ಲಿ ಅಧಿವೇಶನದ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ಲೋಪ ಎಸಗಿರುವ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಏಕಾಏಕಿ ಲೋಕಸಭೆಗೆ ಜಿಗಿದು ಘೋಷಣೆಗಳನ್ನು ಕೂಗಲಾರಂಭಿಸಿದ್ದರು. ಈ ವೇಳೆ ಯುವಕನೊಬ್ಬ ತನ್ನ ಶೂನಿಂದ ಸ್ಮೋಕ್ ಕ್ರ್ಯಾಕರ್ ತೆಗೆದು ಸ್ಪ್ರೇ ಮಾಡಲು ಆರಂಭಿಸಿದ. ಆದರೆ, ಭದ್ರತಾ ಪಡೆಗಳು ಮತ್ತು ಸಂಸದರು ಸಕಾಲದಲ್ಲಿ ಯುವಕರಿಬ್ಬರನ್ನೂ ಹಿಡಿದರು. ಸಂಸತ್ ಭವನದ ಹೊರಗೆ ಗದ್ದಲ ಸೃಷ್ಟಿಸುತ್ತಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾರೆ. ಇಡೀ ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಯುವಕ ತಲೆಮರೆಸಿಕೊಂಡಿದ್ದಾನೆ.

ಬಂಧಿತರನ್ನು ಸಾಗರ್ ಶರ್ಮಾ, ಡಿ ಮನೋರಂಜನ್, ನೀಲಂ ದೇವಿ, ಅಮೋಲ್ ಶಿಂಧೆ ಮತ್ತು ಲಲಿತ್ ಝಾ, ವಿಕ್ಕಿ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ವಿಸಿಟರ್ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಕಲಾಪಕ್ಕೆ ಹಾರಿದ ಇಬ್ಬರು ಯುವಕರ ಪೈಕಿ ಓರ್ವ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಯುವಕ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಬುಧವಾರ ಸಂಜೆ ಸರ್ವಪಕ್ಷ ಸಭೆಯನ್ನೂ ಕರೆಯಲಾಗಿದ್ದು, ಇದರಲ್ಲಿ ಸಿಐಎಸ್‌ಎಫ್, ದೆಹಲಿ ಪೊಲೀಸ್ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ದೆಹಲಿ ಪೊಲೀಸ್ ವಿಶೇಷ ತಂಡದ ಮೂಲಗಳ ಪ್ರಕಾರ, ಸಂಸತ್ತಿನ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳನ್ನು ಮಧ್ಯಾಹ್ನ 2 ಗಂಟೆಗೆ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಡಿಸೆಂಬರ್ 13 ರಂದು ಭದ್ರತಾ ಉಲ್ಲಂಘನೆಯ ಘಟನೆಯ ನಂತರ ಸಂಸತ್ತಿನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಖ್ಯ ಗೇಟ್‌ನಿಂದ ಸಂಸದರಿಗೆ ಮಾತ್ರ ಸಂಸತ್ ಭವನ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದ್ದು, ಕಟ್ಟಡಕ್ಕೆ ಪ್ರವೇಶಿಸುವ ಎಲ್ಲ ವ್ಯಕ್ತಿಗಳನ್ನು ಶೂ ತೆಗೆಸಿ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. (ಪಿಟಿಐ)

ಓದಿ:ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ; ಐವರು ಆರೋಪಿಗಳ ಬಂಧನ

Last Updated : Dec 14, 2023, 1:19 PM IST

ABOUT THE AUTHOR

...view details