ನವದೆಹಲಿ:ಇಂದಿನಿಂದ ಆರಂಭವಾಗಿರುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಮಣಿಪುರ ಮಹಿಳೆಯರ ಬೆತ್ತಲೆ ವಿಡಿಯೋ ಪ್ರತಿಧ್ವನಿಸಿದ್ದು, ಇದರ ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿವೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನೂತನ ಸದಸ್ಯರ ಪದಗ್ರಹಣ ಮತ್ತು ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದ ಬಳಿಕ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕಲಾಪ ಆರಂಭವಾದ ಬಳಿಕ ಮಣಿಪುರ ವಿಷಯವನ್ನು ಚರ್ಚೆ ನಡೆಸಲು ಕೋರಿ ಹಲವಾರು ಸಂಸದರು ನೋಟಿಸ್ ನೀಡಿದರು. ಈ ಬಗ್ಗೆ ಕೇಂದ್ರ ಸರ್ಕಾರ ಗಾಂಭೀರ್ಯ ಪ್ರದರ್ಶಿಸಿಲ್ಲ. ಪ್ರಧಾನಿ ಮೋದಿ ಅವರು ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಆರೋಪಿಸಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ಈ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಉಭಯ ಸದನಗಳು ಮಧ್ಯಾಹ್ನ ಆರಂಭವಾದ ಬಳಿಕ ಅಧಿವೇಶನ ಇನ್ನಷ್ಟು ಕೋಲಾಹಲ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಪ್ರಧಾನಿ ಮೋದಿ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರ ರಕ್ಷಣೆಗಾಗಿ ಎಲ್ಲ ರಾಜ್ಯಗಳಲ್ಲಿ ಕಾನೂನು ಬಿಗಿಗೊಳಿಸಿ ಎಂದು ತಾಕೀತು ಮಾಡಿದ್ದಾರೆ.
ಲೋಕಸಭೆಯಲ್ಲಿ ಗದ್ದಲ:ಸದನ ಆರಂಭವಾದ ಬಳಿಕ ಹಾಲಿ ಸದಸ್ಯರ ಶಪಥ ಮತ್ತು ಅಗಲಿದ ನಾಯಕರಿಗೆ ಸಂತಾಪ ಸೂಚಿಸಿದ ಬೆನ್ನಲ್ಲೇ ಮಣಿಪುರ ವಿಡಿಯೋ ಕುರಿತು ಪ್ರತಿಪಕ್ಷಗಳು ಕೂಗಲಾರಂಭಿಸಿದರು. ಸದನ ಹಳಿ ನಿಯಂತ್ರಣಕ್ಕೆ ಬಾರದ ಸಲುವಾಗಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಇಬ್ಬರು ಹಾಲಿ ಸದಸ್ಯರಿಗೆ ಶಪಥ ಮತ್ತು 11 ಸಂಸದರಿಗೆ ಸಂತಾಪ ಸೂಚಿಸಿದ ನಂತರ ರಾಜ್ಯಸಭೆ ಚೇರ್ಮನ್ ಜಗದೀಪ್ ಧನಕರ್ ಅವರು ಕಲಾಪವನ್ನು ಮುಂದೂಡಿದರು.