ನವದೆಹಲಿ:ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇಕಡಾ 33 ರಷ್ಟು ಮೀಸಲಾತಿ ನೀಡುವ ನಾರಿ ಶಕ್ತಿ ವಂದನ ಮಸೂದೆಗೆ ಲೋಕಸಭೆ ಅಂಗೀಕಾರದ ಮುದ್ರೆಯೊತ್ತಿದೆ. 8 ಗಂಟೆಗಳ ಸುದೀರ್ಘ ಚರ್ಚೆಯ ನಂತರ, ಕೆಳಮನೆ ಐತಿಹಾಸಿಕ ಮಸೂದೆಯನ್ನು ಅನುಮೋದಿಸಿತು. ಚರ್ಚೆಯ ಬಳಿಕ ಮತಕ್ಕೆ ಹಾಕಲಾಗಿದ್ದು, 454 ಸದಸ್ಯರು ಮಸೂದೆಯ ಪರವಾಗಿದ್ದರೆ, ಇಬ್ಬರು ಮಾತ್ರ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ವಿಧೇಯಕವನ್ನು ನಾಳೆ(ಗುರುವಾರ) ರಾಜ್ಯಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ನಿನ್ನೆಯಷ್ಟೇ (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಂಡಿಸಿತ್ತು. ಆಡಳಿತ ಮತ್ತು ವಿಪಕ್ಷಗಳೆಲ್ಲವೂ ಮೊದಲೇ ಮಸೂದೆಗೆ ಬೆಂಬಲ ನೀಡಿದ್ದರಿಂದ ಯಾವುದೇ ಪ್ರತಿರೋಧವಿಲ್ಲದೇ ಸರ್ಕಾರ ವಿಧೇಯಕವನ್ನು ಸಲೀಸಾಗಿ ಅಂಗೀಕಾರ ಪಡೆದುಕೊಂಡಿತು.
ಹೊಸ ಸಂಸತ್ತಿನಲ್ಲಿ ಮಂಡನೆ, ಪಾಸಾದ ಮೊದಲ ಬಿಲ್:ಸೆಪ್ಟೆಂಬರ್ 18 ರಿಂದ ಆರಂಭವಾಗಿರುವ ವಿಶೇಷ ಅಧಿವೇಶನದ 2ನೇ ದಿನವಾದ ಮಂಗಳವಾರ ಹೊಸ ಸಂಸತ್ ಭವನಕ್ಕೆ ಕಲಾಪವನ್ನು ವರ್ಗ ಮಾಡಲಾಗಿತ್ತು. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕಾರಕ್ಕಾಗಿ ಮಂಡಿಸಿದರು. ಸಂವಿಧಾನದ 128 ನೇ ತಿದ್ದುಪಡಿ ಮಸೂದೆ ಇದಾಗಿದ್ದು, ನೂತನ ಸಂಸತ್ ಭವನದಲ್ಲಿ ಮಂಡನೆ ಮತ್ತು ಪಾಸಾದ ಮೊದಲ ಮಸೂದೆ ಇದಾಗಿದೆ.
ಪ್ರತಿಪಕ್ಷಗಳ ಕಡೆಯಿಂದ ಮಸೂದೆಯ ಮೇಲಿನ ಚರ್ಚೆಯನ್ನು ಪ್ರಾರಂಭಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ವಿಧೇಯಕಕ್ಕೆ ಪಕ್ಷ ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ, ಮೀಸಲಾತಿಯನ್ನು ತಡಮಾಡದೆ ತಕ್ಷಣವೇ ಜಾರಿಗೊಳಿಸಬೇಕು. ಒಬಿಸಿ ಮಹಿಳೆಯರಿಗೂ ಮೀಸಲಾತಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಸೋನಿಯಾ ಗಾಂಧಿ ಅವರಲ್ಲದೆ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಸೇರಿದಂತೆ 60 ಸಂಸದರು ಭಾಗವಹಿಸಿದ್ದರು. ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಮಸೂದೆಯ ಬಗ್ಗೆ ಮಾತನಾಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆಗೆ ಉತ್ತರಿಸಿದರು.
2029 ರಲ್ಲಿಯೇ ಜಾರಿ?:ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಿದೆ. ನಾಳೆ ಸರ್ಕಾರ ರಾಜ್ಯಸಭೆಯಲ್ಲೂ ಮಂಡಿಸಿ, ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ಮಸೂದೆ ಕಾನೂನಾಗಿ ಜಾರಿಗೆ ಬರುವುದು 2029 ರಲ್ಲಿ ಎಂದು ಹೇಳಲಾಗಿದೆ. ರಾಜ್ಯ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ, ಜನಗಣತಿ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯಾವಕಾಶ ಬೇಕಾದ ಕಾರಣ ಮಸೂದೆ ಜಾರಿಗೆ ಬರುವುದು ವಿಳಂಬವಾಗಲಿದೆ. 2026 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡಲು ಸಾಧ್ಯವಾಗಲಿದೆ.
ಇದನ್ನೂ ಓದಿ:ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ, ತಡಮಾಡದೇ ಜಾರಿ ಮಾಡಿ: ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಕಿವಿಮಾತು