ಕರ್ನಾಟಕ

karnataka

ETV Bharat / bharat

ಬ್ರಿಟಿಷರ ಕಾಲದ ಕ್ರಿಮಿನಲ್​ ಕಾನೂನುಗಳಿಗೆ ವಿದಾಯ: ಹೊಸ 3 ಮಸೂದೆಗಳು ಲೋಕಸಭೆಯಲ್ಲಿ ಪಾಸ್​

Lok Sabha passes three criminal law bills: ಲೋಕಸಭೆಯಲ್ಲಿ ಇಂದು ಹೊಸ ಮೂರು ಕ್ರಿಮಿನಲ್ ಕಾನೂನು ಮಸೂದೆಗಳು ಅಂಗೀಕಾರಗೊಂಡವು.

Lok Sabha passes three criminal law bills
ಬ್ರಿಟಿಷ್ ಕಾಲದ ಕ್ರಿಮಿನಲ್​ ಕಾನೂನುಗಳಿಗೆ ಲೋಕಸಭೆಯಲ್ಲಿ ಅಧಿಕೃತ ವಿದಾಯ: ಹೊಸ 3 ವಿಧೇಯಕಗಳು ಪಾಸ್​

By PTI

Published : Dec 20, 2023, 5:37 PM IST

Updated : Dec 20, 2023, 6:23 PM IST

ನವದೆಹಲಿ:ಬ್ರಿಟಿಷರ ಕಾಲದ ಕ್ರಿಮಿನಲ್​ ಕಾನೂನುಗಳನ್ನು ಬದಲಿಸುವ ಮೂರು ಹೊಸ ಮಸೂದೆಗಳು ಇಂದು ಲೋಕಸಭೆಯಲ್ಲಿ ಪಾಸ್ ಆಗಿವೆ. ಭಾರತೀಯ ನ್ಯಾಯ (ಎರಡನೇ) ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ-2023 ಮತ್ತು ಭಾರತೀಯ ಸಾಕ್ಷ್ಯ (ಎರಡನೇ)-2023 ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

1860ರ ಭಾರತೀಯ ದಂಡ ಸಂಹಿತೆ (ಐಪಿಸಿ), 1973ರ ಕ್ರಿಮಿನಲ್ ಪ್ರಕ್ರಿಯ ಸಂಹಿತೆ (ಸಿಆರ್​ಪಿಸಿ) ಹಾಗೂ 1872ರ ಭಾರತೀಯ ಸಾಕ್ಷ್ಯ ಕಾಯ್ದೆಗಳ ಬದಲಿಗೆ ಕೇಂದ್ರ ಸರ್ಕಾರ ಕ್ರಮವಾಗಿ ಭಾರತೀಯ ನ್ಯಾಯ (ಎರಡನೇ) ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತೆ-2023, ಭಾರತೀಯ ಸಾಕ್ಷ್ಯ (ಎರಡನೇ)-2023 ಕಾನೂನುಗಳನ್ನು ಜಾರಿಗೆ ತರುತ್ತಿದೆ.

ಮರುರಚಿಸಲಾದ ಹೊಸ ಮಸೂದೆಗಳನ್ನು ಕಳೆದ ವಾರ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್​ ಶಾ ಮಂಡಿಸಿದ್ದರು. ಮಂಗಳವಾರದಿಂದ ಇವುಗಳ ಮೇಲೆ ಚರ್ಚೆ ಮಾಡಲಾಗಿತ್ತು. ಇಂದು ಸದನದಲ್ಲಿ ಅಮಿತ್​ ಶಾ ಮಸೂದೆಗಳ ಬಗ್ಗೆ ಉತ್ತರ ನೀಡಿದ ಬಳಿಕ ಅಂಗೀಕಾರ ನೀಡಲಾಯಿತು.

ದೇಶದ್ರೋಹ 'ರಾಷ್ಟ್ರದ ವಿರುದ್ಧ ಅಪರಾಧ': ಇದಕ್ಕೂ ಮುನ್ನ ಮಾತನಾಡಿದ ಅಮಿತ್ ಶಾ, ''ಮೂರು ಕಾನೂನುಗಳು ಭಯೋತ್ಪಾದನೆಯ ಸ್ಪಷ್ಟ ವ್ಯಾಖ್ಯಾನ ಹೊಂದಿವೆ. ದೇಶದ್ರೋಹಕ್ಕೆ 'ರಾಷ್ಟ್ರದ ವಿರುದ್ಧ ಅಪರಾಧಗಳು' ಎಂಬ ಹೊಸ ವ್ಯಾಖ್ಯಾನ ನೀಡುತ್ತವೆ'' ಎಂದರು.

''ಮೂರು ವಿಧೇಯಕಗಳನ್ನು ಸಮಗ್ರ ಸಮಾಲೋಚನೆಯ ನಂತರವೇ ರೂಪಿಸಲಾಗಿದೆ. ಅಂಗೀಕಾರಕ್ಕಾಗಿ ಸದನದ ಮುಂದೆ ತರುವ ಮುನ್ನ ಕರಡು ಶಾಸನಗಳ ಪ್ರತಿ ಅಲ್ಪವಿರಾಮ ಮತ್ತು ಪೂರ್ಣ ವಿರಾಮವನ್ನೂ ಓದಲಾಗಿದೆ. ಅಸ್ತಿತ್ವದಲ್ಲಿದ್ದ ಕಾನೂನುಗಳು ನ್ಯಾಯ ನೀಡುವ ಉದ್ದೇಶ ಹೊಂದದೇ ಶಿಕ್ಷೆ ವಿಧಿಸುವ ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದ್ದವು. ಮೂರು ಹೊಸ ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆ ಸ್ಥಾಪಿಸಲು ಪ್ರಯತ್ನಿಸುತ್ತವೆ. ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಅದರ ಸಂಕೇತಗಳಿಂದ ಮುಕ್ತಗೊಳಿಸುತ್ತವೆ'' ಎಂದು ಶಾ ಪ್ರತಿಪಾದಿಸಿದರು.

ಗುಂಪು ಹತ್ಯೆಗೆ ಮರಣದಂಡನೆ ಶಿಕ್ಷೆ: ''ಇದೇ ಮೊದಲ ಬಾರಿಗೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಮಾನವ ಸ್ಪರ್ಶ ಹೊಂದಿದೆ. ಹಳೆಯ ಕಾನೂನುಗಳು ಸೆಕ್ಷನ್ 375-376ರ ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ಪಟ್ಟಿ ಮಾಡಿದ್ದವು. ಹೊಸ ಮಸೂದೆಯು ಸೆಕ್ಷನ್ 63ರ ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳ ಪಟ್ಟಿ ಮಾಡಿದೆ. ಕೊಲೆ ಪ್ರಕರಣವು ಸೆಕ್ಷನ್ 302ರ ಬದಲಿಗೆ ಸೆಕ್ಷನ್ 101, ಅಪಹರಣ ಪ್ರಕರಣವು ಸೆಕ್ಷನ್​ 359 ಬದಲು ಈಗ ಸೆಕ್ಷನ್ 136ರಡಿ ಸೇರಿಸಲಾಗಿದೆ. ಈ ಮಸೂದೆಗಳು ಗುಂಪು ಹತ್ಯೆಗೆ ಮರಣದಂಡನೆ ಶಿಕ್ಷೆ ಒದಗಿಸುತ್ತವೆ'' ಎಂದು ವಿವರಿಸಿದರು.

ಇದನ್ನೂ ಓದಿ:ಹೊಸ ಅಪರಾಧ ಕಾನೂನು ಮಸೂದೆಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿವೆ: ಅಮಿತ್​ ಶಾ

Last Updated : Dec 20, 2023, 6:23 PM IST

ABOUT THE AUTHOR

...view details