ಕರ್ನಾಟಕ

karnataka

ETV Bharat / bharat

20 ನಿಮಿಷಗಳವರೆಗೆ ಲೋಕಸಭೆಯಲ್ಲಿ ಆಡಿಯೋ ಮ್ಯೂಟ್​: 'ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ..' ಕಾಂಗ್ರೆಸ್ ಟೀಕೆ - Congress on Lok Sabha mute

ಲೋಕಸಭೆಯ ಕಲಾಪವನ್ನು ಶುಕ್ರವಾರ ಸುಮಾರು 20 ನಿಮಿಷಗಳ ಕಾಲ ನಿಶ್ಯಬ್ದಗೊಳಿಸಲಾಗಿದ್ದು, ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಮೋದಿ ಸರ್ಕಾರ ನೂತನ ತಂತ್ರಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Lok Sabha Muted for 20 minutes
ಲೋಕಸಭೆಯಲ್ಲಿ ಆಡಿಯೋ ಮ್ಯೂಟ್

By

Published : Mar 17, 2023, 9:11 PM IST

ನವದೆಹಲಿ:ಬಜೆಟ್ ಅಧಿವೇಶನದ ಎರಡನೇ ಹಂತದ ಐದನೇ ದಿನವಾದ ಶುಕ್ರವಾರ ಲೋಕಸಭೆಯನ್ನು ಸುಮಾರು 20 ನಿಮಿಷಗಳ ಕಾಲ ನಿಶ್ಯಬ್ದಗೊಳಿಸಲಾಯಿತು. ಹೌದು, ವಿರೋಧ ಪಕ್ಷದ ಸಂಸದರು, "ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಬಿಡಿ'' ಎಂದು ಘೋಷಣೆಗಳನ್ನು ಕೂಗುತ್ತಾ ಕೆಳಮನೆಯ ಬಾವಿಗೆ ಇಳಿದರು. ಈ ಘಟನೆ ನಡೆಯುತ್ತಿದ್ದಂತೆ ಸದನವನ್ನು ಮುಂದೂಡಲಾಯಿತು. ಇದೇ ರೀತಿಯ ಗದ್ದಲ ಗಲಾಟೆ ಕೂಡಾ ರಾಜ್ಯಸಭೆಯಲ್ಲಿ ಕಂಡುಬಂದಿತು.

ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕಾಸ್ತ್ರ:ಆಡಿಯೋ ಆಫ್ ಮಾಡಿದ ಕ್ಷಣದ ವಿಡಿಯೋಗಳನ್ನು ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದೆ. ಕಾಂಗ್ರೆಸ್​ ಪಕ್ಷವು, ರಾಜ್ಯಸಭಾ ಉಪಾಧ್ಯಕ್ಷ ಜಗದೀಪ್ ಧಂಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಬಾಹ್ಯಚರ್ಯೆಗಳನ್ನು ಬಿಂಬಿಸುವ ವಿಡಿಯೋಗಳನ್ನು ಸಹ ಹಂಚಿಕೊಂಡಿದೆ.

ಲೋಕಸಭೆ 'ಆಡಿಯೋ-ಆಫ್' ಭರ್ಜರಿ ಸದ್ದು:ಲೋಕಸಭೆಯ 'ಆಡಿಯೋ-ಆಫ್' ಎಪಿಸೋಡ್ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, 'ಭಾರತದಲ್ಲಿ ಪ್ರಜಾಪ್ರಭುತ್ವ' ಕುರಿತು ಕಾಮೆಂಟ್ ಮಾಡಿದ ವಿಡಿಯೋಗಳನ್ನ ಹಂಚಿಕೊಳ್ಳಲಾಗಿದೆ. ಇದು ಆಡಳಿತಾರೂಢ ಬಿಜೆಪಿಗೆ ಸಾಕಷ್ಟು ಕೋಪವನ್ನು ಉಂಟುಮಾಡಿದೆ. ಮೋದಿ ಸರ್ಕಾರ ಪಾತಾಳಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ. ಆರಂಭದಲ್ಲಿ ಪ್ರತಿಪಕ್ಷಗಳ ಸಂಸದರ ಮೈಕ್‌ಗಳನ್ನು ಮ್ಯೂಟ್ ಮಾಡಲಾಗಿತ್ತು. ಇಂದು ಸದನದ ಸಂಪೂರ್ಣ ಕಲಾಪವನ್ನು ಮ್ಯೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ತೀವ್ರ ವಾಕ್​ ಸಮರ ನಡೆಸಿದೆ.

ಕಾಂಗ್ರೆಸ್​ ನಾಯಕರಿಂದ ಟ್ವೀಟಾಸ್ತ್ರ ಪ್ರಯೋಗ:ಲೋಕಸಭೆಯ 'ಆಡಿಯೋ ಸ್ನ್ಯಾಪ್' ಸಂಚಿಕೆ ಕುರಿತು ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು, "ಮಾತಿನಲ್ಲಿ ಅಷ್ಟೇ ಪ್ರಜಾಪ್ರಭುತ್ವ, ಕ್ರಿಯೆಯಲ್ಲಿ ದೌರ್ಜನ್ಯ" ಎಂದು ಮರು ಟ್ವೀಟ್ ಮಾಡಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "ಜನರಿಂದ ಆಯ್ಕೆಯಾದ ಸಂಸದರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಮತ್ತು ಲೋಕಸಭೆಯ ಕಲಾಪಗಳನ್ನು ಮ್ಯೂಟ್ ಮಾಡಿರುವುದು ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಇದು ದೇಶವಾಸಿಗಳ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ. ಇದು ಆರೋಗ್ಯಕರ ಸಂಕೇತವೇ? ಪ್ರಜಾಪ್ರಭುತ್ವವೇ? ಎಂದು ಅವರು ಟ್ವೀಟ್​ ಮೂಲಕ ಪ್ರಶ್ನಿಸಿದರು.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, "ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷದ ಸದಸ್ಯರ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡಿರುವುದು ಆಶ್ಚರ್ಯ ಉಂಟು ಮಾಡಿದೆ. ಈ ಮೂಲಕ ಇಂದು ಇಡೀ ಲೋಕಸಭೆಯನ್ನೇ ಮ್ಯೂಟ್ ಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಪುರಾವೆ ಏನು ಬೇಕು" ಎಂದು ಟ್ವೀಟ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮೈಕ್​ಗಳನ್ನು ಮ್ಯೂಟ್​ ಮಾಡಿರುವುದು ಉದ್ದೇಶಪೂರ್ವಕವಾಗಿದೆ ಎಂಬುದನ್ನು ಬಿಜೆಪಿ ಸರ್ಕಾರ ನಿರಾಕರಿಸಿದೆ. ಇದು ಕೇವಲ ತಾಂತ್ರಿಕ ದೋಷ ಎಂದು ಹೇಳಿಕೊಂಡಿದೆ. ಆದರೆ, ಈ ಹಿಂದೆಯೂ ಸದನದ ಕಲಾಪದಲ್ಲಿ ಆಡಿಯೋ ಮ್ಯೂಟ್ ಮಾಡಿರುವ ಇಂತಹ ಪ್ರಸಂಗಗಳು ನಡೆದಿವೆ.

ಬಿಜೆಪಿ ಹಣಿಸಲು ಪ್ರತಿಪಕ್ಷಗಳಿಂದ ರಣತಂತ್ರ:ರಾಹುಲ್ ಗಾಂಧಿಯವರ 'ಪ್ರಜಾಪ್ರಭುತ್ವ' ಹೇಳಿಕೆಯ ಮೇಲಿನ ಗದ್ದಲದಿಂದಾಗಿ ಬಜೆಟ್ ಅಧಿವೇಶನದ ಎರಡನೇ ಹಂತವನ್ನು ಪದೇ ಪದೇ ಮುಂದೂಡಲಾಯಿತು. ಅದಾನಿ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿರುವ ಪ್ರತಿಪಕ್ಷಗಳು ತಮ್ಮ ಬೇಡಿಕೆ ಪಟ್ಟನ್ನು ಬಿಗಿಗೊಳಿಸಿವೆ. ಈ ನಡುವೆ ಬಿಜೆಪಿ ಸಂಸದರು ರಾಹುಲ್ ಗಾಂಧಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿದ್ದಾರೆ. ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಪ್ರಮುಖ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಕೇಸರಿ ಬ್ರಿಗೇಡ್ ಈ ತಂತ್ರವನ್ನು ಅಳವಡಿಸಿಕೊಂಡಿದೆ ಎಂದು ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸುತ್ತಿವೆ.

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ದುಬಾರಿಯಾಗಲಿದೆ ಮದ್ಯದ ಬೆಲೆ.. ಎಣ್ಣೆ ಮೇಲೆ 10ರೂ ಹಾಲಿನ ಸೆಸ್​​!

ABOUT THE AUTHOR

...view details