ಕರ್ನಾಟಕ

karnataka

ETV Bharat / bharat

ಸರ್ಕಾರಿ ಬಂಗಲೆ ಖಾಲಿ ಮಾಡಲು ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ

ಸಂಸತ್​ ಸದಸ್ಯ ಅನರ್ಹಗೊಂಡಿರುವ ರಾಹುಲ್​ ಗಾಂಧಿಗೆ ಸರ್ಕಾರ ನೀಡಿದ್ದ ಅಧಿಕೃತ ನಿವಾಸವನ್ನು ಖಾಲಿ ಮಾಡುವಂತೆ ನೋಟಿಸ್​ ನೀಡಲಾಗಿದೆ.

ಅನರ್ಹ ಸಂಸದ ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ
ಅನರ್ಹ ಸಂಸದ ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ

By

Published : Mar 27, 2023, 6:46 PM IST

Updated : Mar 27, 2023, 8:27 PM IST

ನವದೆಹಲಿ:ಸಂಸತ್​ ಸದಸ್ಯ ಸ್ಥಾನದಿಂದ ಅನರ್ಹಗೊಂಡ ಬಳಿಕ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿರುವ ಕಾಂಗ್ರೆಸ್​ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರಿಗೆ ಸರ್ಕಾರ ನೀಡಿರುವ ಮನೆಯನ್ನು ಖಾಲಿ ಮಾಡುವಂತೆ ನೋಟಿಸ್​ ಜಾರಿ ಮಾಡಲಾಗಿದೆ. ಲೋಕಸಭೆಯ ವಸತಿ ಸಮಿತಿಯು ರಾಹುಲ್ ಗಾಂಧಿಗೆ ಸರ್ಕಾರ ಮಂಜೂರು ಮಾಡಿದ ಬಂಗಲೆಯನ್ನು ಶೀಘ್ರವೇ ತೊರೆಯುವಂತೆ ಸೂಚಿಸಿ ಸುತ್ತೋಲೆಯನ್ನು ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರ ರಾಜಧಾನಿ ದಿಲ್ಲಿಯ ತುಘಲಕ್ ಲೇನ್​ನಲ್ಲಿರುವ 12 ನೇ ಬಂಗಲೆಯನ್ನು ಸಂಸದರಾಗಿದ್ದ ರಾಹುಲ್​ ಗಾಂಧಿ ಅವರಿಗೆ ನೀಡಲಾಗಿತ್ತು. ಇದೀಗ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಶಿಕ್ಷೆಗೆ ಒಳಗಾಗಿದ್ದು, ಸರ್ಕಾರಿ ಸೌಲಭ್ಯಗಳನ್ನು ಕಳೆದುಕೊಂಡಿದ್ದಾರೆ. ಅದರಂತೆ ಲೋಕಸಭೆಯ ವಸತಿ ಸಮಿತಿಯಿಂದ ಮಂಜೂರಾಗಿದ್ದ ನಿವಾಸವನ್ನು ಏಪ್ರಿಲ್ 22 ರೊಳಗೆ ತೆರವು ಮಾಡುವಂತೆ ಗಡುವು ನೀಡಲಾಗಿದೆ.

ರಾಹುಲ್​ ಗಾಂಧಿ ನಿವಾಸ ತೆರವುಗೊಳಿಸಲು ನೀಡಲಾದ ನೋಟಿಸ್​ ಅನ್ನು ವಿಸ್ತರಿಸಲು ಕೋರಿ ಪತ್ರ ಬರೆಯಬಹುದು. ಈ ವಿನಂತಿಯನ್ನು ಸಮಿತಿಯು ಪರಿಗಣಿಸಬಹುದು. ಲೋಕಸಭೆ ಸೆಕ್ರೆಟರಿಯೇಟ್ ಹೊರಡಿಸಿದ ಅಧಿಸೂಚನೆಯನ್ನು ಎಸ್ಟೇಟ್ ನಿರ್ದೇಶನಾಲಯ, ದಿಲ್ಲಿ ಮುನ್ಸಿಪಲ್ ಕೌನ್ಸಿಲ್ ಸೇರಿದಂತೆ ವಿವಿಧ ಇಲಾಖೆಗಳಿಗೆ ವರ್ಗಾಯಿಸಲಾಗುತ್ತದೆ. ಸಂಸತ್​​ ಸದಸ್ಯರಾಗಿದ್ದಾಗ ರಾಹುಲ್​ಗೆ ಲಭ್ಯವಿರುವ ಎಲ್ಲಾ ಪ್ರಯೋಜನಗಳನ್ನು ಅಖೈರುಗೊಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಜರಾತ್‌ನ ಸೂರತ್​ ನ್ಯಾಯಾಲಯವು ಮಾರ್ಚ್ 23 ರಂದು ರಾಹುಲ್​ ಗಾಂಧಿಯನ್ನು ಕ್ರಿಮಿನಲ್​ ಮಾನ ಹಾನಿ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಿತು. ಅಲ್ಲದೇ, 2 ವರ್ಷ ಜೈಲು ಶಿಕ್ಷೆ ವಿಧಿಸಿತು. ಇದರಿಂದ ರಾಹುಲ್​ ಸಂಸತ್​ ಸದಸ್ಯರ ನಿಯಮ ಅನ್ವಯ ಲೋಕಸಭಾ ಸದಸ್ಯರಾಗಿ ಸ್ವಯಂಚಾಲಿತವಾಗಿ ಅನರ್ಹಗೊಂಡರು. ಅನರ್ಹಗೊಂಡ ಲೋಕಸಭಾ ಸದಸ್ಯರು ಸದಸ್ಯತ್ವ ಕಳೆದುಕೊಂಡ ಒಂದು ತಿಂಗಳೊಳಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಹುಲ್​ ಬೆಂಬಲಿಸಿ ಪ್ರತಿಭಟನೆ:ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದ ಆಸ್ತಿಯನ್ನು ಕೊಳ್ಳೆ ಹೊಡೆದು ವಿದೇಶಕ್ಕೆ ತೆರಳಿದ ಕಳ್ಳರ ವಿರುದ್ಧ ಟೀಕಿಸಿದ್ದಕ್ಕೆ ರಾಹುಲ್​ರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಕಾಂಗ್ರೆಸ್​ ಹೇಳುತ್ತಿದೆ. ಇನ್ನೊಂದೆಡೆ ಬಿಜೆಪಿ, ರಾಹುಲ್​ ವಿವಾದಿತ ಹೇಳಿಕೆ ಹಿಂದುಳಿವ ವರ್ಗಕ್ಕೆ ಮಾಡುತ್ತಿರುವ ಅವಮಾನ ಎಂದು ಹೇಳಿದೆ. ರಾಹುಲ್​ ಗಾಂಧಿ ವಿರುದ್ಧ ಕೈಗೊಳ್ಳಲಾದ ಕ್ರಮದ ವಿರುದ್ಧ ಕಾನೂನು ಮತ್ತು ರಾಜಕೀಯವಾಗಿ ಹೋರಾಡುವುದಾಗಿ ಕಾಂಗ್ರೆಸ್​ ಹೇಳಿದೆ.

ಪ್ರಕರಣವೇನು?:2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಮೋದಿ ಉಪನಾಮವನ್ನು ಬಳಸಿ ಟೀಕಿಸಿದ್ದರು. ಇದು ಆ ಹೆಸರಿನ ಜೊತೆಗೆ ಸಮುದಾಯಕ್ಕೆ ಮಾಡಿದ ಅವಮಾನ, ಮಾನ ಹಾನಿ ಎಂದು ಗುಜರಾತ್​ ಶಾಸಕರೊಬ್ಬರು ಪ್ರಕರಣ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸೂರತ್​ ಕೋರ್ಟ್​ ರಾಹುಲ್​ ಅಪರಾಧಿ ಎಂದು ಘೋಷಿಸಿ 2 ವರ್ಷ ಶಿಕ್ಷೆ ವಿಧಿಸಿದೆ.

ಓದಿ:ಮಂದೀಪ್ ಸಿಧು ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿದ್ದ ಅಮೃತಪಾಲ್..!

Last Updated : Mar 27, 2023, 8:27 PM IST

ABOUT THE AUTHOR

...view details