ಪಾಟ್ನಾ, ಬಿಹಾರ: ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಸಂಬಂಧಿಸಿದಂತೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇಂದು (ಶುಕ್ರವಾರ) ವಿರೋಧ ಪಕ್ಷಗಳ ಸಭೆ ನಡೆಯಲಿದೆ. ರಾಜಕೀಯ ಪಕ್ಷಗಳ ಸಭೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಸಭೆಯಲ್ಲಿ ಪಾಲ್ಗೊಳ್ಳಲು ಮುಖಂಡರ ದಂಡೇ ಆಗಮಿಸುತ್ತಿದೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಎಂಕೆ ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಈಗಾಗಲೇ ಪಾಟ್ನಾದಲ್ಲಿ ಬೀಡುಬಿಟ್ಟಿದ್ದಾರೆ.
ಇನ್ನು ಪಾಟ್ನಾ ನಗರಕ್ಕೆ ಬೆಳಗ್ಗಿನಿಂದಲೇ ವಿರೋಧ ಪಕ್ಷದ ಹಿರಿಯ ನಾಯಕರು ಲಗ್ಗೆ ಇಡುತ್ತಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ, ಖರ್ಗೆ ಮತ್ತು ಹೇಮಂತ್ ಸೋರೆನ್, ಶರದ್ ಪವಾರ್ ಸೇರಿದಂತೆ ಅನೇಕ ನಾಯಕರು ಪಾಟ್ನಾಕ್ಕೆ ದೌಡಾಯಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಜೆಡಿಯು ಸೇರಿದಂತೆ 17-18 ಪಕ್ಷಗಳು ಒಟ್ಟಿಗೆ ಸೇರಿ ತಂತ್ರ ರೂಪಿಸಲಿವೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಗುರುವಾರವೇ ಪಾಟ್ನಾ ತಲುಪಿದ್ದಾರೆ. ಇಂದು ರಾಹುಲ್ ಗಾಂಧಿ, ಖರ್ಗೆ, ಶರದ್ ಪವಾರ್, ಉದ್ಧವ್ ಠಾಕ್ರೆ ಅವರಂತಹ ಹಿರಿಯ ನಾಯಕರು ಇಂದು ನಗರಕ್ಕೆ ಭೇಟಿ ನೀಡಿದ್ದಾರೆ. ಈ ಸಭೆಯ ನಂತರ, 2024 ರ ಲೋಕಸಭೆ ಚುನಾವಣೆಗೆ ಯಾವ ರೀತಿ ರಾಜಕೀಯ ಚಳುವಳಿ ನಡೆಯಲಿದೆ ಎಂಬ ಚಿತ್ರಣವು ಬಹಳ ಮಟ್ಟಿಗೆ ಸ್ಪಷ್ಟವಾಗಲಿದೆ.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸಹ ಇಂದು ಬೆಳಗ್ಗೆ ಪಾಟ್ನಾ ತಲುಪಿದ್ದಾರೆ. ಪಾಟ್ನಾ ವಿಮಾನ ನಿಲ್ದಾಣದಿಂದ ನೇರವಾಗಿ ರಾಜ್ಯ ಅತಿಥಿ ಗೃಹಕ್ಕೆ ತೆರಳಿದರು. ಇದಕ್ಕೂ ಮುನ್ನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸಚಿವರಾದ ಜಮಾ ಖಾನ್ ಮತ್ತು ರಮಾನಂದ್ ಯಾದವ್ ಅವರು ಒಮರ್ ಅಬ್ದುಲ್ಲಾ ಅವರನ್ನು ಸ್ವಾಗತಿಸಿದರು.
ಬೆಳಗ್ಗೆ 11ರಿಂದ ಸಭೆ:ಪಾಟ್ನಾದ ಬಿಹಾರ ಸಿಎಂ ಅಧಿಕೃತ ನಿವಾಸದಲ್ಲಿರುವ ನೆಕ್ ಸಂವಾದ್ ಕೊಠಡಿಯಲ್ಲಿ ಸಭೆ ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 11ರಿಂದ ಸಭೆ ಆರಂಭವಾಗಲಿದೆ. ಈ ಸಭೆ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟನಾ ಭಾಷಣದೊಂದಿಗೆ ಕಾರ್ಯ ಕ್ರಮ ಆರಂಭವಾಗಲಿದ್ದು, ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲಿದ್ದಾರೆ. ಬಳಿಕ ಉಳಿದ ನಾಯಕರು ಭಾಷಣ ಮಾಡಲಿದ್ದಾರೆ. ಕೊನೆಯಲ್ಲಿ ವಿಪಕ್ಷ ನಾಯಕರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.