ಪಾಟ್ನಾ, ಬಿಹಾರ್: ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಸರ್ಕಾರದಲ್ಲಿರುವ ಹಿಂದೂಸ್ತಾನಿ ಅವಾಮ್ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಸಂತೋಷ್ ಕುಮಾರ್ ಸುಮನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರು ನಿತೀಶ್ ಸಂಪುಟದಲ್ಲಿ ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಅವರ ರಾಜೀನಾಮೆಯಿಂದ ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿದೆ. ಆದರೆ, ಅವರ ರಾಜೀನಾಮೆ ಅಥವಾ ಮಹಾಮೈತ್ರಿಕೂಟ ತೊರೆಯುವುದರಿಂದ ಸರ್ಕಾರದ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗ್ತಿದೆ.
ಪಕ್ಷದ ವಿಲೀನಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ. ಬಡವರ ಹಿತಾಸಕ್ತಿ ಕಾಪಾಡಲು ನಾವು ಪಕ್ಷ ಸ್ಥಾಪಿಸಿದ್ದೇವೆ. ಬಡವರ ಹಿತ ಮತ್ತು ಕಾರ್ಯಕರ್ತರ ಗೌರವವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಈ ನಿರ್ಧಾರ ಕೈಗೊಂಡಿದೆ. ಬಿಹಾರ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ ಸಚಿವ ಡಾ. ಸಂತೋಷ್ ಕುಮಾರ್ ಸುಮನ್ (ಮಾಂಝಿ) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹಿಂದೂಸ್ತಾನಿ ಅವಾಮ್ ಮೋರ್ಚಾದ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅಮರೇಂದ್ರ ಕುಮಾರ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ಎನ್ಡಿಎಗೆ ಮಾಂಝಿ :ಜಿತನ್ ರಾಮ್ ಮಾಂಝಿ ಅವರು ಮಹಾಮೈತ್ರಿಕೂಟ ತೊರೆದು ಎನ್ಡಿಎಗೆ ಸೇರಬಹುದು ಎಂಬ ಮಾತು ಬಿಹಾರದ ರಾಜಕೀಯ ಪಡಸಾಲೆಯಲ್ಲಿ ಕೆಲ ದಿನಗಳಿಂದ ಕೇಳಿ ಬರುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha election 2024) ಸೀಟು ಹಂಚಿಕೆಯ ಸಂಭವನೀಯ ಸೂತ್ರದಿಂದ ಅವರು ಬೇಸರಗೊಂಡಿದ್ದಾರೆ ಎಂದು ನಂಬಲಾಗುತ್ತಿದೆ.
ಮಾಂಝಿ ಮನಸ್ಸಿನಲ್ಲಿ ಏನಿದೆ? : ಸದ್ಯ ಮಾಂಝಿ ಮಹಾಮೈತ್ರಿಕೂಟದಲ್ಲಿ ಒಂಟಿತನ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ 2024ರ ಲೋಕಸಭೆ ಚುನಾವಣೆಗೂ ಮುನ್ನ ಮಾಂಝಿ ಪಕ್ಷ ಬದಲಾಯಿಸಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಅಮಿತ್ ಶಾ ಭೇಟಿ ನಂತರ ಹೆಚ್ಚಾದ ಊಹಾಪೋಹ:ವಾಸ್ತವವಾಗಿ, ನಮ್ಮ ಪಕ್ಷದ ಅಧ್ಯಕ್ಷ ಜಿತನ್ ರಾಮ್ ಮಾಂಝಿ ಅವರು ಏಪ್ರಿಲ್ 13 ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದಾಗ, ಪಕ್ಷ ಬದಲಾವಣೆಯ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಆಗ ಮಾಂಝಿ ಈ ಸಭೆಯ ರಾಜಕೀಯ ಅರ್ಥವನ್ನು ಹೊರತೆಗೆಯಬಾರದು ಎಂದು ಹೇಳಿದ್ದರು.
ನಿತೀಶ್ ಸಮಸ್ಯೆಗಳನ್ನು ಹೆಚ್ಚಿಸುತ್ತಿರುವ ಮಾಂಝಿ:ಕಳೆದ ಕೆಲವು ತಿಂಗಳುಗಳಲ್ಲಿ ಮಾಂಝಿ ತಮ್ಮ ಹೇಳಿಕೆಗಳಿಂದ ನಿತೀಶ್ ಸರ್ಕಾರದ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಹಾರದಲ್ಲಿ ಮದ್ಯ ನಿಷೇಧವನ್ನು ಅವರು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ.
ಮಾಂಝಿ ಹೇಳಿದ್ದೇನು? :ನನ್ನ ಮಗ ಸಂತೋಷ್ ಸುಮನ್ ಯುವಕನಾಗಿದ್ದು, ವಿದ್ಯಾವಂತನಾಗಿದ್ದಾನೆ. ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಕೇಳಿ ಬಂದಿರುವವರಲ್ಲಿ ನನ್ನ ಮಗನಿಗೆ ಹೆಚ್ಚು ಅರ್ಹತೆ ಇದೆ. ಸಂತೋಷ್ ಸುಮನ್ ಅವರು ನೆಟ್ ಅರ್ಹತೆ ಹೊಂದಿದ್ದು, ಪ್ರಾಧ್ಯಾಪಕರಾಗಿದ್ದಾರೆ ಎಂದು ಹೇಳಿದ್ದರು. ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಬಿಹಾರ್ ರಾಜಕೀಯ ವಲಯದಲ್ಲಿ ಸದ್ಯ ಮಾಂಝಿ ಪುತ್ರ ನೀಡಿರುವ ರಾಜೀನಾಮೆಯಿಂದ ಸಂಚಲನ ಸೃಷ್ಟಿಯಾಗಿದೆ. ಮುಂಬರುವ ದಿನಗಳಲ್ಲಿ ಸಿಎಂ ನಿತೀಶ್ ಕುಮಾರ್ ಲೋಕಸಭೆ ಚುನಾವಣೆಗೆ ಯಾವ ರೀತಿ ತಂತ್ರ ಹೆಣೆಯಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.
ಇದನ್ನು ಓದಿ:Twitter: ಟ್ವಿಟರ್ ನಿಷೇಧದ ಬೆದರಿಕೆ ಹಾಕಿದ್ದ ಭಾರತ - ಜಾಕ್ ಡಾರ್ಸಿ ಆರೋಪ, ಇದು ಅಪ್ಪಟ ಸುಳ್ಳೆಂದ ಕೇಂದ್ರ ಸರ್ಕಾರ