ನವದೆಹಲಿ: 2021-22ರ ಆರ್ಥಿಕ ವರ್ಷಕ್ಕೆ ಕೇಂದ್ರ ಸರ್ಕಾರದ ಹಣಕಾಸು ಪ್ರಸ್ತಾಪಗಳನ್ನು ಜಾರಿಗೆ ತರುವ 2021ರ ಹಣಕಾಸು ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.
ಕೇಂದ್ರ ಬಜೆಟ್‌ನಲ್ಲಿ ಮಾಡಿದ ಪ್ರಸ್ತಾವನೆಗಳಲ್ಲಿ ಬದಲಾವಣೆಗಳನ್ನು ಹೊಂದಿರುವ ಮಸೂದೆಯ ಬಗೆಗಿನ ಚರ್ಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು. ಸಂಸತ್ತು ಹಣಕಾಸು ಮಸೂದೆಯನ್ನು ಅಂಗೀಕರಿಸುವುದು ಬಜೆಟ್ ಪ್ರಕ್ರಿಯೆಯ ಪೂರ್ಣತೆ ಸೂಚಿಸುತ್ತದೆ ಎಂದು ಈ ವೇಳೆ ತಿಳಿಸಿದ್ದಾರೆ.
ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಅನುಸರಣೆ ಹೊರೆ ಸರಾಗಗೊಳಿಸುವ ಹಿನ್ನೆಲೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಚಿವೆ ಹೇಳಿದ್ದಾರೆ. ಹಾಗೆ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಇರಲ್ಲ.
ಕೊರೊನಾದಿಂದ ಉಂಟಾಗುವ ತೊಂದರೆ ನಿವಾರಣೆ ಮಾಡಿಕೊಳ್ಳಲು ನಾವು ತೆರಿಗೆ ಹೆಚ್ಚಿಸುವ ಮೂಲಕ ಸಂಪನ್ಮೂಲಗಳನ್ನು ಉತ್ಪಾದಿಸಲು ಹೋಗಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವರು ಪ್ರಧಾನಿ ಹೇಳಿಕೆ ಉಲ್ಲೇಖಿಸಿದರು.
ಈ ವೇಳೆ ಹಲವಾರು ವಿರೋಧ ಪಕ್ಷದ ಸದಸ್ಯರು, ಪೆಟ್ರೋಲ್ ಮತ್ತು ಡೀಸೆಲ್‌ನ ಹೆಚ್ಚಿನ ಬೆಲೆ ಬಗ್ಗೆ ಗಮನ ಸೆಳೆದರು. ಹಾಗೆಯೇ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯಡಿ ತರಬೇಕು ಎಂದು ಆಗ್ರಹ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವೆ, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲು ಕೇಂದ್ರ ಮುಕ್ತವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯಗಳು ಇದಕ್ಕೆ ತೆರಿಗೆ ವಿಧಿಸುತ್ತವೆ. ಇಂದಿನ ಚರ್ಚೆಯ ಆಧಾರದ ಮೇಲೆ ಪ್ರಾಮಾಣಿಕವಾಗಿ ಚರ್ಚೆಗೆ ಬಂದರೆ, ನಾನು ಅದನ್ನು ಕಾರ್ಯಸೂಚಿಯಲ್ಲಿ ಅಳವಡಿಸಲು ಮತ್ತು ಅದನ್ನು ಚರ್ಚಿಸಲು ಸಂತೋಷಪಡುತ್ತೇನೆ ಎಂದರು.
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಕಾರಣ ಈ ತೆರಿಗೆ ವಿಧಿಸುವ ಅಧಿಕಾರ ಕೇಂದ್ರಕ್ಕೆ ಮಾತ್ರವಲ್ಲ. ರಾಜ್ಯಗಳು ಕೂಡ ಇಂಧನಕ್ಕೆ ತೆರಿಗೆ ವಿಧಿಸುತ್ತವೆ. ಆದರೆ, ಕೇಂದ್ರ ತೆರಿಗೆ ವಿನಿಯೋಗಿಸಬಹುದಾದ ಮೊತ್ತದ ಭಾಗವಾಗಿದೆ ಎಂದು ಪ್ರತಿಕ್ರಿಯಿಸಿದರು.