ನವದೆಹಲಿ:ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ವಿವಾದಿತ ಪ್ರಜಾಪ್ರಭುತ್ವ ಹೇಳಿಕೆ, 'ಅದಾನಿ ಹಗರಣ'ದ ತನಿಖೆ ನಡೆಸುವ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ತೀವ್ರ ತಿಕ್ಕಾಟ ಮುಂದುವರೆದಿದ್ದು 6ನೇ ದಿನದ ಸಂಸತ್ ಬಜೆಟ್ ಅಧಿವೇಶನವೂ ಆಹುತಿಯಾಗುವ ಸಾಧ್ಯತೆ ಗೋಚರಿಸಿದೆ. ಇಂದು ಬೆಳಗ್ಗೆ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಗದ್ದಲ ಶುರುವಾದ ಕಾರಣ ಸಭಾಧ್ಯಕ್ಷರು ಮಧ್ಯಾಹ್ನ 2 ಗಂಟೆಗೆ ಸದನಗಳನ್ನು ಮುಂದೂಡಿದ್ದಾರೆ.
ಬಜೆಟ್ ಮಂಡನೆಯಾದ ತಿಂಗಳ ಬಳಿಕ ಆರಂಭವಾದ 2ನೇ ಚರಣದ ಅಧಿವೇಶನ ಆಡಳಿತ ಮತ್ತು ವಿಪಕ್ಷಗಳ ತೀವ್ರ ಗುದ್ದಾಟಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಾರೆ ಎಂಬುದನ್ನು ಆಡಳಿತ ಪಕ್ಷ ಬಲವಾಗಿ ವಿರೋಧಿಸುತ್ತಿದೆ. ಸದನದ ಸದಸ್ಯರೊಬ್ಬರು ಈ ರೀತಿ ದೇಶದ ಮರ್ಯಾದೆಯನ್ನು ವಿದೇಶದಲ್ಲಿ ಹಾಳು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಅವರು ದೇಶದ ಜನರಿಗೆ ಸಂಸತ್ತಿನಲ್ಲಿ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದರು.
ಇತ್ತ ವಿಪಕ್ಷಗಳೂ ಕೂಡ ಶ್ರೀಮಂತ ಉದ್ಯಮಿ ಅದಾನಿ ಸಂಸ್ಥೆಯಿಂದ ನಡೆದಿದೆ ಎಂದು ಹೇಳಲಾದ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಹಿಂಡನ್ಬರ್ಗ್ ವರದಿಯನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಅಲ್ಲದೇ, ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ತೀವ್ರ ವಾಗ್ದಾಳಿ ನಡೆಸುತ್ತಿವೆ. ಇದರಿಂದ ಸಂಸತ್ ಅಧಿವೇಶನ 5 ದಿನ ಕಳೆದರೂ ಯಾವುದೇ ಫಲಪ್ರದ ಕಾಣುತ್ತಿಲ್ಲ.
ಮಸೂದೆಗಳಿಗೆ ಸಿಗುತ್ತಾ ಅಂಗೀಕಾರ?:2ನೇ ಹಂತದ ಬಜೆಟ್ ಅಧಿವೇಶನ ಏಪ್ರಿಲ್ 6 ರವರೆಗೆ ನಡೆಯಲಿದೆ. ಹಣಕಾಸು ಮಸೂದೆಯ ಅಂಗೀಕಾರ ಸೇರಿದಂತೆ ರಾಜ್ಯಸಭೆಯಲ್ಲಿ 26 ಮತ್ತು ಲೋಕಸಭೆಯಲ್ಲಿ 9 ಮಸೂದೆಗಳು ಅಂಗೀಕಾರಕ್ಕಾಗಿ ಬಾಕಿ ಉಳಿದಿವೆ. ಹಣಕಾಸು ಮಸೂದೆಯನ್ನು ಸರ್ಕಾರ ಪಾಸು ಮಾಡಿಕೊಂಡರೂ ಉಳಿದ ಮಸೂದೆಗಳಿಗೆ ಚರ್ಚೆ ಮತ್ತು ಅಂಗೀಕಾರ ಪಡೆಯಬೇಕಿದೆ. ಆದರೆ, ಕಲಾಪ ನಡೆಯದೇ ಗದ್ದಲದಲ್ಲೇ ಮುಕ್ತಾಯವಾಗುತ್ತಿರುವ ಕಾರಣ ಬಿಲ್ಗಳು ಪಾಸ್ ಆಗಲಿವೆಯಾ ಎಂಬ ಪ್ರಶ್ನೆ ಮೂಡಿದೆ.