ಪಾಟ್ನಾ (ಬಿಹಾರ): ಹೈಕೋರ್ಟ್ ಎಚ್ಚರಿಕೆ ಬೆನ್ನಲ್ಲೇ ಮೇ 15ರ ವರೆಗೆ ರಾಜ್ಯಾದ್ಯಂತ ಲಾಕ್ಡೌನ್ ವಿಧಿಸಿ ಬಿಹಾರ ಸರ್ಕಾರ ಆದೇಶ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿ ಸ್ಪಷ್ಟಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, "ನಿನ್ನೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮೇ 15ರ ವರೆಗೆ ಲಾಕ್ಡೌನ್ ಜಾರಿಗೆ ತರಲು ನಿರ್ಧರಿಸಲಾಗಿದೆ. ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಬಿಕ್ಕಟ್ಟು ನಿರ್ವಹಣಾ ತಂಡಕ್ಕೆ ಸೂಚಿಸಲಾಗಿದೆ" ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಾವು-ನೋವು ಹೆಚ್ಚುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಿಹಾರ ಸರ್ಕಾರದ ವಿರುದ್ಧ ಹೈಕೋರ್ಟ್ ಆಕ್ರೋಶ ಹೊರಹಾಕಿತ್ತು. ಲಾಕ್ಡೌನ್ ಜಾರಿಗೊಳಿಸಿ, ಇಲ್ಲವೇ ನಾವು ನೀಡುವ ಕಠಿಣ ಆದೇಶಕ್ಕೆ ತಲೆಬಾಗಿ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಬಿಹಾರದಲ್ಲಿ ಸೋಮವಾರ ಒಂದೇ ದಿನ 11,407 ಹೊಸ ಸೋಂಕಿತರು ಪತ್ತೆಯಾಗಿದ್ದು, 82 ಮಂದಿ ಮೃತಪಟ್ಟಿದ್ದರು. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಕೇಸ್ಗಳ ಸಂಖ್ಯೆ 5 ಲಕ್ಷಕ್ಕೆ ಹಾಗೂ ಸಾವಿನ ಸಂಖ್ಯೆ 2821ಕ್ಕೆ ಹೆಚ್ಚಳವಾಗಿದೆ.