ಮುಂಬೈ:ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಪ್ರತಿದಿನ ಸಾವಿರಾರು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಇದು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇದೇ ವಿಷಯವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ರಾಜ್ಯದ ಜನರನ್ನುದ್ದೇಶಿಸಿ ಮಹತ್ವದ ಭಾಷಣ ಮಾಡಿದ್ದು, ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಲಾಕ್ಡೌನ್ ಹೇರಿಕೆ ತಳ್ಳಿಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿರುವ ಠಾಕ್ರೆ, ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ಮತ್ತಷ್ಟು ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದರು.
ರಾಜ್ಯದಲ್ಲಿ ಇಲ್ಲಿಯವರೆಗೆ 65 ಲಕ್ಷ ಜನರಿಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಇಂದು ಕೂಡ 3 ಲಕ್ಷ ಜನರಿಗೆ ಲಸಿಕೆ ವಿತರಣೆಯಾಗಿದೆ. ಲಸಿಕೆ ನೀಡಿದ ಬಳಿಕ ಕೂಡ ಕೆಲವರು ಸೋಂಕಿಗೊಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಮಾಸ್ಕ್ ಹಾಕಿಕೊಳ್ಳದೇ ಇರುವುದು ಎಂದಿದ್ದಾರೆ.