ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್ಗಳನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಕಾಲ ಸಂಪೂರ್ಣ ಲಾಕ್‌ಡೌನ್ ವಿಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಭೆ ನಡೆಸಿದ್ದು, ಇಂದು ರಾತ್ರಿಯಿಂದ ಏಪ್ರಿಲ್ 26ರ ಬೆಳಗ್ಗೆ 6 ಗಂಟೆಯವರೆಗೆ ಲಾಕ್‌ಡೌನ್ ಜಾರಿ ಮಾಡಲು ನಿರ್ಧರಿಸಿದ್ದಾರೆ. ಈ ವಿಚಾರವನ್ನು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ತುರ್ತು ಸ್ಥಿತಿಯಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ.. ಕೊರೊನಾ ರೋಗಿಗಳ ಜೀವ ಉಳಿಸಿದ ದೆಹಲಿ ಪೊಲೀಸ್
ದೆಹಲಿಯಲ್ಲಿ ಪ್ರತಿ ಗಂಟೆಗೆ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳಂತೆ ದಿನವೊಂದರಲ್ಲಿ 25 ಸಾವಿರಕ್ಕೂ ಅಧಿಕ ಕೇಸ್ಗಳು ದಾಖಲಾಗುತ್ತಿದೆ. ಐಸಿಯು ಬೆಡ್ಗಳ ಕೊರತೆ ಇದೆ. ಮುಂದಿನ 6 ದಿನಗಳಲ್ಲಿ ದೆಹಲಿಯಲ್ಲಿ ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡುತ್ತೇವೆ. ಲಾಕ್‌ಡೌನ್ ಅವಧಿಯನ್ನು ಆಮ್ಲಜನಕ, ಔಷಧಿ ವ್ಯವಸ್ಥೆ ಮಾಡಲು ಬಳಸಲಾಗುತ್ತದೆ. ನಮಗೆ ಸಹಾಯ ಮಾಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದರು.