ಮುಂಬೈ (ಮಹಾರಾಷ್ಟ್ರ):ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಂಡು ಬಂದಿದೆ. ದೇಶದ ಮಹಾನಗರಗಳಲ್ಲಿ ಒಂದಾದ ಮುಂಬೈನಲ್ಲಿ ಬುಧವಾರ ಒಂದೇ ದಿನ 15,166 ಹೊಸ ಸೋಂಕಿತರು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021 ಏಪ್ರಿಲ್ 4ರಂದು ಅಂದರೆ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಅಂದರೆ 11,206 ಸೋಂಕಿತರು ಪತ್ತೆಯಾಗಿದ್ದು, ಅದಕ್ಕಿಂತ ಹೆಚ್ಚು ಸೋಂಕಿತರು ಬುಧವಾರ ಒಂದೇ ದಿನ ಪತ್ತೆಯಾಗಿದ್ದಾರೆ. ಮೊದಲ ಅಲೆಯಲ್ಲಿ ಅತಿ ಹೆಚ್ಚು ಸೋಂಕಿತರ ಸಂಖ್ಯೆ (2,848 ಸೋಂಕಿತರು) 2020ರ ಅಕ್ಟೋಬರ್ 7ರಂದು ಕಂಡು ಬಂದಿದ್ದವು.
ಕೊರೊನಾ ಆರಂಭವಾದಾಗಿನಿಂದ ಇಲ್ಲಿಯವರೆಗೆ ಮುಂಬೈ ನಗರವೊಂದರಲ್ಲೇ ಕಂಡುಬಂದ ಸೋಂಕಿತರ ಸಂಖ್ಯೆ 8,33,628ಕ್ಕೆ ಏರಿಕೆಯಾಗಿದೆ. ಈವರೆಗೆ 16,384 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಬುಧವಾರ ಪತ್ತೆಯಾದ ಕೊರೊನಾ ಸೋಂಕಿತರಲ್ಲಿ 1,218 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನಲ್ಲಿರುವ ಆಸ್ಪತ್ರೆಗಳಲ್ಲಿ 35,487 ಬೆಡ್ಗಳಿದ್ದು, ಕೇವಲ 5,104 ಬೆಡ್ಗಳ ಅಥವಾ ಶೇಕಡಾ 14.40ರಷ್ಟು ಬೆಡ್ಗಳು ಈಗ ಬಳಕೆಯಾಗಿವೆ.