ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ವಿಸ್ತರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ಪಾಸಿಟಿವಿಟಿ ಪ್ರಮಾಣ ಇನ್ನೂ ಶೇ. 5 ಕ್ಕಿಂತ ಕೆಳಗೆ ಬಂದಿಲ್ಲ. ಆದ್ದರಿಂದ ಮೆಟ್ರೋ ಸೇವೆ ಸ್ಥಗಿತ ಸೇರಿದಂತೆ ಎಲ್ಲಾ ನಿರ್ಬಂಧಗಳು ಮುಂದುವರೆಯಲಿದೆ ಎಂದರು.
ಲಾಕ್‌ಡೌನ್ ಬಳಿಕ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಿದೆ. ಹಾಗಾಗಿ, ಇದುವರೆಗೆ ಕಾಪಾಡಿಕೊಂಡು ಬಂದ ಪರಿಸ್ಥಿತಿಯನ್ನು ಕಳೆದುಕೊಳ್ಳಲು ನಾವು ಬಯಸುವುದಿಲ್ಲ. ಆದ್ದರಿಂದ ಮುಂದಿನ ಸೋಮವಾರದ ಬೆಳಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ವಿಸ್ತರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.