ಕಡಲೂರು(ತಮಿಳುನಾಡು): ಕೊರೊನಾ ವೈರಸ್ ಎರಡನೇ ಅಲೆ ಅಬ್ಬರಿಸುತ್ತಿರುವ ಕಾರಣ ಕೆಲವೊಂದು ರಾಜ್ಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದು, ಇನ್ನೂ ಕೆಲ ರಾಜ್ಯಗಳು ವಾರಾಂತ್ಯದ ಲಾಕ್ಡೌನ್ ಘೋಷಣೆ ಮಾಡಿವೆ. ತಮಿಳುನಾಡಿನಲ್ಲೂ ಇದು ಜಾರಿಯಲ್ಲಿದೆ.
ವೀಕೆಂಡ್ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಭಾನುವಾರ ಎಲ್ಲವನ್ನೂ ಬಂದ್ ಮಾಡಲಾಗಿದೆ. ಪ್ರಮುಖವಾಗಿ ದೇವಸ್ಥಾನ ಬಂದ್ ಆಗಿವೆ. ಆದರೆ ಕೆಲವೊಂದು ಜೋಡಿ ಇಲ್ಲಿನ ತಿರುವನಂತಿಪುರಂ ದೇವನಾಥ ಸ್ವಾಮಿ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಮದುವೆ ಮಾಡಿಕೊಂಡಿವೆ.
ದೇವಸ್ಥಾನದ ಮುಂದಿನ ರಸ್ತೆಯಲ್ಲೇ ನಡೆದ ಮದುವೆ ಕಡಲೂರು ಜಿಲ್ಲೆಯ ತಿರುವನಂತಿಪುರಂ ದೇವನಾಥ ಸ್ವಾಮಿ ದೇವಸ್ಥಾನವನ್ನು ಸಣ್ಣ ತಿರುಪತಿ(ಚಿನ್ನ ತಿರುಪತಿ) ಎಂದೇ ಕರೆಯಲಾಗುತ್ತೆ. ಪ್ರಮುಖ ದಿನಗಳಂದು ಇಲ್ಲಿ ನೂರಾರು ಜೋಡಿಯ ವಿವಾಹ ನಡೆಯುತ್ತದೆ. ಇಲ್ಲಿ ಮದುವೆ ಮಾಡಿಸಿಕೊಳ್ಳಲು ವಧು-ವರರ ಕುಟುಂಬ ದೇವಾಲಯದ ಟ್ರಸ್ಟ್ಗೆ ಅರ್ಜಿ ಸಲ್ಲಿಸುವುದು ಕಡ್ಡಾಯ. ಸದ್ಯ ಕೊರೊನಾ ವೈರಸ್ಆರ್ಭಟದ ಹಿನ್ನೆಲೆ ದೇವಾಲಯ ಬಂದ್ ಆಗಿದ್ದು, ಮದುವೆ ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.
ಆದರೆ ಇಂದು ಮುಹೂರ್ತದ ದಿನವಾಗಿರುವ ಕಾರಣ ಅನೇಕ ಕುಟುಂಬಗಳು ಈ ದೇವಸ್ಥಾನದಲ್ಲೇ ಮದುವೆ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದವು. ದೇವಸ್ಥಾನ ಬಂದ್ ಆಗಿದ್ದರೂ ಅನೇಕ ಜೋಡಿಗಳು ದೇವಾಲಯದ ಮುಂದಿನ ರಸ್ತೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿವೆ. ಸುಮಾರು 50ಕ್ಕೂ ಅಧಿಕ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.