ತಮಿಳುನಾಡು:ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ಭಾರತೀಯ ಮೂರು ಸೇನಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸಿಬ್ಬಂದಿಯ ಪಾರ್ಥಿವ ಶರೀರಗಳನ್ನು ಹೊತ್ತ ಆ್ಯಂಬುಲೆನ್ಸ್ ನೀಲಗಿರಿ ಜಿಲ್ಲೆಯ ಮದ್ರಾಸ್ ರೆಜಿಮೆಂಟ್ನಿಂದ ಸೂಳೂರು ವಾಯುನೆಲೆಗೆ ಬರುತ್ತಿದ್ದ ಮಾರ್ಗದಲ್ಲಿ ಜನರು ವಾಹನಗಳ ಮೇಲೆ ಹೂವು ಸುರಿದು, ಭಾರತ್ ಮಾತಾಕಿ ಜೈ ಎಂದು ಕೂಗಿ ಗೌರವ ಸಲ್ಲಿಸಿದ್ದಾರೆ.
ಮದ್ರಾಸ್ ರೆಜಿಮೆಂಟ್ನಿಂದ ಸೂಳೂರುವರೆಗಿನ ಮಾರ್ಗಮಧ್ಯದ ರಸ್ತೆಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ತುಂಬಿದ್ದ ಜನರು ವೀರಯೋಧರಿಗೆ ಜೈಕಾರ ಕೂಗಿ, ಸೆಲ್ಯೂಟ್ ಮಾಡಿ, ಕೈ ಮುಗಿದು ಗೌರವ ಸಲ್ಲಿಸಿದ್ದಾರೆ. ಅಲ್ಲದೇ ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ ಕೂಗು ಪ್ರತಿಧ್ವನಿಸುತ್ತಿತ್ತು.
ಇದಲ್ಲದೇ, ಎಲ್ಲ 13 ದೇಹಗಳನ್ನು ಭಾರತೀಯ ವಾಯುಪಡೆಯ C-130J ಸೂಪರ್ ಹರ್ಕ್ಯುಲಸ್ ವಿಮಾನದಲ್ಲಿ ತಮಿಳುನಾಡಿನ ಸೂಳೂರಿನಿಂದ ದೆಹಲಿಗೆ ತರಲಾಗುತ್ತಿದೆ. ಐಎಎಫ್ ಮುಖ್ಯಸ್ಥರು ಈಗಾಗಲೇ ವಾಯುನೆಲೆಯಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.