ಮೋತಿಹಾರ್ (ಬಿಹಾರ್): ವೃದ್ಧೆಯ ಸಾವಿಗೆ ಕಾರಣರಾಗಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಮೋತಿಹಾರ್ ಜಿಲ್ಲೆಯಲ್ಲಿ ನಡೆದಿದೆ.
ವೃದ್ಧೆ ಮನೆಯಲ್ಲಿ ಮದ್ಯ ಹುಡುಕುವ ವೇಳೆ ಆಕೆಗೆ ಪೊಲೀಸ್ ಸಿಬ್ಬಂದಿ ಕಾಲಿನಿಂದ ಒದ್ದಿದ್ದು, ಇದರಿಂದ ವೃದ್ಧೆ ಸಾವನಪ್ಪಿದ್ದಾರೆ. ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರಿಗೆ ಥಳಿಸಿದ್ದಾರೆ.
ಮದ್ಯ ಶೋಧದ ವೇಳೆ ವೃದ್ಧೆಯ ಜೀವ ತೆಗೆದ ಪೊಲೀಸರು ಕೊಟವಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಕಟೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಮೃತಪಟ್ಟ ವೃದ್ಧೆಯನ್ನು ಸುಶೀಲಾ ದೇವಿ ಎಂದು ಗುರುತಿಸಲಾಗಿದ್ದು, ಆಕೆಯ ಕಿರಿಯ ಮಗ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾನೆ.
ವೃದ್ಧೆಯ ಮನೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಿಸಿಡಲಾಗಿದೆ ಎಂದು ಆರೋಪಿಸಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ, ಪೊಲೀಸರು ಅಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಕೆಯು ಕಿರಿಯ ಮಗ ಆರೋಪಿಸಿದ್ದಾರೆ.
ಪೊಲೀಸರು ಮನೆ ಬಳಿ ಬಂದಾಗ ಮನೆಯೊಳಗೆ ಬರದಂತೆ ನಮ್ಮ ಅಮ್ಮ ತಡೆದಿದ್ದಾರೆ ಅದರಿಂದ ಕೋಪಗೊಂಡ ಪೊಲೀಸ್ ಸಿಬ್ಬಂದಿಯೊಬ್ಬರು ಆಕೆಗೆ ಬಲವಾಗಿ ಒದೆದಿದ್ದಾರೆ. ತಕ್ಷಣ ನೆಲದ ಮೇಲೆ ಬಿದ್ದ ಅಮ್ಮ ಅಲ್ಲೇ ಸಾವನಪ್ಪಿದ್ದಾರೆ ಎಂದು ಪುತ್ರ ತಿಳಿಸಿದ್ದಾನೆ.
ಘಟನೆಯ ಬಳಿಕ ಪೂರ್ವ ಚಂಪಾರಣ್ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಘಟನೆ ಸಂಬಂಧ ತನಿಖೆಗೂ ಆದೇಶಿಸಿದ್ದಾರೆ.