ನವದೆಹಲಿ:ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಎಬಿಜಿ ಶಿಪ್‌ಯಾರ್ಡ್ ಪ್ರಕರಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ. ಎಬಿಜಿ ಶಿಪ್‌ಯಾರ್ಡ್ ಕಂಪನಿ ಆರ್ಥಿಕ ನಷ್ಟದಿಂದ ದಿವಾಳಿಯಾಗಿದೆ ಎಂದು 2014 ರಲ್ಲಿಯೇ ಘೋಷಿಸಿಕೊಂಡಿದೆ. ಇದಕ್ಕೆ ಯುಪಿಎ ಸರ್ಕಾರವೇ ಹೊಣೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ.
ಎಬಿಜಿ ಶಿಪ್‌ಯಾರ್ಡ್ ವಂಚನೆ ಪ್ರಕರಣವನ್ನು ಕಡಿಮೆ ಅವಧಿಯಲ್ಲಿ ಪತ್ತೆ ಮಾಡಲಾಗಿದೆ. ಈ ವಿಚಾರದಲ್ಲಿ ಬ್ಯಾಂಕ್ಗಳ ಕೆಲಸವನ್ನು ಮೆಚ್ಚಬೇಕು. ವಂಚನೆಯನ್ನು ಬಹುಬೇಗನೆ ಪತ್ತೆ ಮಾಡಿದ್ದಾರೆ ಎಂದು ಆರ್ಬಿಐ ಮಂಡಳಿಯ ಸದಸ್ಯರನ್ನುದ್ದೇಶಿಸಿ ಮಾತನಾಡುವ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇಂತಹ ದೊಡ್ಡ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲು ಬ್ಯಾಂಕುಗಳು ಸಾಮಾನ್ಯವಾಗಿ 55 ತಿಂಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಈ ಪ್ರಕರಣವನ್ನು ಅತಿ ಕಡಿಮೆ ಅವಧಿಯಲ್ಲಿ ಶೋಧ ನಡೆಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.