ಪಾಟ್ನಾ: ಬಿಹಾರದಲ್ಲಿನ ದಿಢೀರ್ ರಾಜಕೀಯ ಬೆಳವಣಿಗೆಗಳಿಂದ ಲೋಕ ಜನಶಕ್ತಿ ಪಕ್ಷ - ಎಲ್‌ಜೆಪಿಯ ಕೇಂದ್ರ ಮಾಜಿ ಸಚಿವ ದಿವಂಗತ ರಾಮ್‌ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ರಾಜಕೀಯ ಹಾದಿ ಬಲು ಕಠಿಣವಾದಂತಿದೆ.
ಜಾತಿ ಆಧಾರಿತ ರಾಜಕಾರಣಕ್ಕೆ ಸಾಕ್ಷಿಯಾಗಿರುವ ಬಿಹಾರದಲ್ಲಿ ಹೊಸ ಹೊಸ ರಾಜಕೀಯ ಪ್ರತಿಭೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಪ್ರತಿಯೊಬ್ಬ ರಾಜಕಾರಣಿ ತನ್ನ ಪಕ್ಷ ಹಾಗೂ ಉತ್ತರಾಧಿಕಾರಿಯನ್ನಾಗಿ ತಮ್ಮ ಮಕ್ಕಳನ್ನು ನೇಮಿಸುತ್ತಾರೆ. ಅಂತಹ ಮಕ್ಕಳ ಪೈಕಿ ಚಿರಾಗ್ ಪಾಸ್ವಾನ್ ಕೂಡ ಒಬ್ಬರು. ತನ್ನ ರಾಜಕೀಯ ಅನುಭವ ಹಾಗೂ ಚಾಣಾಕ್ಷತೆಯಿಂದ ರಾಮ್ ವಿಲಾಸ್ ಪಾಸ್ವಾನ್ ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಅಧಿಕಾರದಿಂದ ಮಾತ್ರ ವಂಚಿತರಾಗಿಲ್ಲ. ಯುಪಿಎ, ಎನ್‌ಡಿಎ ಎಲ್ಲ ಸರ್ಕಾರಗಳಲ್ಲೂ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಪಾಸ್ವಾನ್ ಅವರ ಸ್ನೇಹಿತರಾದ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಹಾಗೂ ಬಿಹಾರದ ಪ್ರಸ್ತುತ ಸಿಎಂ ನಿತೀಶ್ ಕುಮಾರ್ ಅವರು ರಾಮ್ ವಿಲಾಸ್ ಪಾಸ್ವಾನ್‌ರನ್ನು ವಿಜ್ಞಾನಿ ಅಂತ ಕರೆದಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಿಂದ ಹಿಡಿದು ಇಲ್ಲಿ ವರೆಗೆ ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಇವರಿಗೆ ಸಚಿವ ಸ್ಥಾನ ಸಿಗುತ್ತಿತ್ತು. ಆದರೆ, ಕಳೆದ ವರ್ಷ ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಬಿಹಾರದಲ್ಲಿನ ರಾಜಕೀಯ ಚಿತ್ರಣ ಬದಲಾಗಿದೆ.
ಇದನ್ನೂ ಓದಿ: ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಪ್ರತಿಮೆ ಅನಾವರಣ
2014ರ ಮಾರ್ಚ್ 3 ರಂದು ಬಿಹಾರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ರಾಜಕೀಯಕ್ಕಾಗಿ ಹೊಸ ಕಾರ್ಯತಂತ್ರಗಳನ್ನು ರೂಪಿಸಿದ್ದರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಇತರೆ ಪಕ್ಷಗಳು ಮಕಾಡೆ ಮಲಗಿದವು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಡಳಿತದ ವಿರುದ್ಧ ಮುಜಾಫುರ್‌ಪುರ್‌ನಲ್ಲಿ ಜಯಪ್ರಕಾಶ್ ನಾರಾಯಣ ವಿದ್ಯಾರ್ಥಿ ಚಳವಳಿ(ಜೆಪಿ ಮೂಮೆಂಟ್) ಆರಂಭಿಸಿದ್ದರು.
ಇದೇ ಸ್ಥಳದಲ್ಲಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಲಿ ನಡೆಸಿದ್ದರು. ಆಗ ಪಾಸ್ವಾನ್ ರ‍್ಯಾಲಿ ಭಾಗವಾಗಿ ಗಮನ ಸೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಈ ರ‍್ಯಾಲಿಯ ಯಶಸ್ಸಿನ ಎಲ್ಲ ಕ್ರೆಡಿಟ್ ಅನ್ನು ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್‌ಗೆ ನೀಡಲಾಗಿತ್ತು. ಜೊತೆಗೆ ಎಲ್‌ಜೆಪಿ ಚುನಾವಣೆಯಲ್ಲಿನ ಸಾಧನೆಗೂ ಚಿರಾಗ್ ಅವರೇ ಕಾರಣ ಎಂದು ಬಿಂಬಿಸಲಾಗಿತ್ತು.
2014ರ ಲೋಕಸಭೆ ಚುನಾವಣೆಯಲ್ಲಿ ಎಲ್‌ಜೆಪಿ 7 ಸ್ಥಾನಗಳನ್ನು ಗಳಿಸಿತ್ತು. ರಾಮ್ ವಿಲಾಸ್ ಪಾಸ್ವಾನ್ ತನ್ನ ಪುತ್ರ ಚಿರಾಗ್ ಪಾಸ್ವಾನ್ ಅವರನ್ನು ಮುಂಚೂಣಿಗೆ ತಂದಾಗ ಎಲ್‌ಜೆಪಿಯಲ್ಲಿ ಯಾರೂ ಕೂಡ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದ್ರೀಗ ಚಿರಾಗ್‌ರನ್ನು ಪಕ್ಷದ ಉನ್ನತ ಸ್ಥಾನದಿಂದಲೇ ಕೆಳಗಿಸಲಾಗಿದೆ. ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಚಿರಾಗ್ ಪಾಸ್ವಾನ್ ಮುಂದಿರುವ ಆಯ್ಕೆಗಳೇನು?
ಪಕ್ಷದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿಕೊಂಡಿರುವ ಚಿರಾಗ್ ಪಾಸ್ವಾನ್ ಸದ್ಯ ಹೊಸ ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ.
- ಎಲ್‌ಜೆಪಿ ಸಂಸದೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಸಲು ಕಾರಣರಾದ ಸಂಸದರ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಬಹುದು.
- ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು. ಆದ್ರೆ ಕೆಲ ತಜ್ಞರು ಹೇಳುವಂತೆ ಇಸಿಯಿಂದ ಯಾವುದೇ ಪರಿಹಾರ ಸಿಗುವ ಸಾಧ್ಯತೆ ಇಲ್ಲ ಎಂದಿದ್ದಾರೆ.
- ರಾಜಕೀಯ ಉಳಿವಿಗಾಗಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
- ಬೇರೆ ಪಕ್ಷಗಳೊಂದಿಗೆ ಮೈತ್ರಿಗೆ ಒಲವು ತೋರಿದ್ರೆ ಆರ್‌ಜೆಡಿಯೊಂದಿಗೆ ಕೈ ಜೋಡಿಸಬಹುದು. ಆಗ ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್ ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್ ಹಾಗೂ ಸಿಎಂ ನಿತೀಶ್ ಕುಮಾರ್ ವಿರುದ್ಧ ಹೋರಾಟಕ್ಕೆ ವೇದಿಕೆ ಸಿಕ್ಕಂತಾಗುತ್ತದೆ.