ಪಾಟ್ನಾ: ಬಿಹಾರ ರಾಜಧಾನಿಯಲ್ಲಿ ಹಗಲು ಹೊತ್ತಲ್ಲಿ ಮನೆಗೆ ನುಗ್ಗಿದ ಕಿರಾತಕನೋರ್ವ ಇಡೀ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಳಂದ ವೈದ್ಯಕೀಯ ಕಾಲೇಜು-ಆಸ್ಪತ್ರೆಯ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಹಾಲಕ್ಷ್ಮಿ ಹಾಗೂ ಆಕೆಯ ಮಗಳು, ಗಂಡನ ಮೇಲೆ ಪಕ್ಕದ ಮನೆಯ ಯುವಕ ಹಲ್ಲೆ ನಡೆಸಿದ್ದಾನೆ.
Live Video: ಹಾಡಹಗಲೇ ಮನೆಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ಕೃತ್ಯ ಸೆರೆ - ಪಾಟ್ನಾದಲ್ಲಿ ಕುಟುಂಬದ ಮೇಲೆ ಹಲ್ಲೆ
ಬಿಹಾರ ರಾಜಧಾನಿ ಪಾಟ್ನಾದ ಆಲಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಲ್ಲೇ ಮನೆಗೆ ನುಗ್ಗಿದ ವ್ಯಕ್ತಿಯೋರ್ವ ಕುಟುಂಬದ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಆಲಂಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಪೀತಾಂಬ್ರಾ ದೇವಸ್ಥಾನದ ಅಲ್ಫಾಬಾದ್ ಕಾಲೋನಿಯಲ್ಲಿ ವಾಸಿಸುತ್ತಿರುವ ಮಹಾಲಕ್ಷ್ಮಿ ತನ್ನ ಮನೆಯ ಮುಂದೆ ಸ್ವಚ್ಛಗೊಳಿಸುತ್ತಿರುವಾಗ ನೆರೆಮನೆಯ ಬಿರ್ಜು ಸಾಹ್ನಿ ತನ್ನ ಮಗ ತ್ರಿಲೋಕಿ ಮತ್ತು ಪತ್ನಿಯೊಂದಿಗೆ ಬಂದು ಜಗಳವಾಡಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಮನೆಯೊಳಗೆ ನುಗ್ಗಿ ಮಹಾಲಕ್ಷ್ಮಿ ಮಗಳ ಮೇಲೆಯೂ ಕ್ರೂರವಾಗಿ ದಾಳಿ ನಡೆಸಿದ್ದಾರೆ. ಈ ವೇಳೆ ಪತ್ನಿ ಮತ್ತು ಮಗಳನ್ನು ರಕ್ಷಿಸಲು ಬಂದ ದಿವ್ಯಾಂಗ ಪತಿಯನ್ನೂ ಸಹ ತ್ರಿಲೋಕಿ ಥಳಿಸಿದ್ದಾನೆ. ಈ ಸಮಯದಲ್ಲಿ, ಆತನ ಪೋಷಕರು ಹೊರಗೆ ನಿಂತುಕೊಂಡು ಇನ್ನಷ್ಟು ದಾಳಿ ನಡೆಸುವಂತೆ ಪ್ರಚೋದಿಸುತ್ತಿದ್ದರು. ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಬಳಿಕ ಮಾತನಾಡಿದ ಮಹಾಲಕ್ಷ್ಮಿ ಮಗಳು ಸಿಂಗಾಣಿ, "ಕಳೆದ ಎರಡು ವರ್ಷಗಳಲ್ಲಿ ನೆರೆಹೊರೆಯವರು ಅನೇಕ ಬಾರಿ ನಮ್ಮನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ಎಸ್‌ಎಸ್‌ಪಿಗೆ ದೂರು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬೆಳಗ್ಗೆ ಮತ್ತೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಜೀವಕ್ಕೆ ಅಪಾಯವಿದೆ" ಎಂದು ಅಳಲು ತೋಡಿಕೊಂಡಿದ್ದಾಳೆ.