ಕೊಚ್ಚಿ : ಲಿವ್ ಇನ್ ರಿಲೇಶನ್ಶಿಪ್ನಲ್ಲಿ ವಾಸಿಸುತ್ತಿರುವ ಜೋಡಿಯು ನ್ಯಾಯಾಲಯದಲ್ಲಿ ವಿಚ್ಛೇದನ ಕೋರುವಂತಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯಾವುದೇ ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯ್ದೆಯ ಅನುಸಾರ ವಿವಾಹವಾಗದೆ, ಕೇವಲ ಒಪ್ಪಂದದ ಆಧಾರದ ಮೇಲೆ ಇಬ್ಬರು ವ್ಯಕ್ತಿಗಳು ಒಟ್ಟಿಗೆ ವಾಸಿಸಲು ನಿರ್ಧರಿಸಿದಾಗ ಅದನ್ನು ಮದುವೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ವಿಚ್ಛೇದನ ಕೇಳುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.
"ಕಾನೂನು ಈವರೆಗೂ ಲಿವ್ ಇನ್ ಸಂಬಂಧವನ್ನು ಮದುವೆ ಎಂದು ಗುರುತಿಸಿಲ್ಲ. ವೈಯಕ್ತಿಕ ಕಾನೂನಿನ ಪ್ರಕಾರ ಅಥವಾ ವಿಶೇಷ ವಿವಾಹ ಕಾಯಿದೆಯಂತಹ ಜಾತ್ಯತೀತ ಕಾನೂನಿಗೆ ಅನುಸಾರವಾಗಿ ವಿವಾಹವನ್ನು ನಡೆಸಿದರೆ ಮಾತ್ರ ಅದಕ್ಕೆ ಕಾನೂನು ತನ್ನ ಮಾನ್ಯತೆ ನೀಡುತ್ತದೆ. ಪರಸ್ಪರ ಒಪ್ಪಂದವೊಂದರ ಮೂಲಕ ವ್ಯಕ್ತಿಗಳು ಒಟ್ಟಿಗೆ ಬದುಕಲು ನಿರ್ಧರಿಸಿದರೆ ಅದನ್ನು ಮದುವೆ ಎಂದು ಹೇಳಲು ಮತ್ತು ಅದರ ಮೇಲೆ ವಿಚ್ಛೇದನವನ್ನು ಪಡೆಯಲು ಅವರು ಅರ್ಹರಾಗುವುದಿಲ್ಲ” ಎಂದು ಹೈಕೋರ್ಟ್ನ ವಿಭಾಗೀಯ ಪೀಠ ತಿಳಿಸಿದೆ.
"ಕಾನೂನು ವಿಚ್ಛೇದನವನ್ನು ಕಾನೂನುಬದ್ಧ ವಿವಾಹವನ್ನು ಬೇರ್ಪಡಿಸುವ ಸಾಧನವಾಗಿ ಪರಿಗಣಿಸುತ್ತದೆ. ಸಂಬಂಧವು ಪರಸ್ಪರ ಕಟ್ಟುಪಾಡುಗಳು ಅಥವಾ ಕರ್ತವ್ಯಗಳ ರಚನೆಗೆ ಅರ್ಹತೆ ಪಡೆಯುವ ಪರಿಸ್ಥಿತಿ ಇರಬಹುದು. ಆದರೆ ಅಂಥ ಸಂಬಂಧವನ್ನು ವಿಚ್ಛೇದನದ ಉದ್ದೇಶಕ್ಕಾಗಿ ಗುರುತಿಸಬಹುದು ಎಂಬುದು ಅದರ ಅರ್ಥವಲ್ಲ" ಎಂದು ನ್ಯಾಯಾಲಯ ಹೇಳಿತು.
ವಿಶೇಷ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿರುವ ಜೋಡಿಯು ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ತೀರ್ಪು ಬಂದಿದೆ. ಅರ್ಜಿದಾರ ಜೋಡಿಯ ಪೈಕಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಕ್ರಿಶ್ಚಿಯನ್ ಆಗಿದ್ದಾರೆ. ಫೆಬ್ರವರಿ 2006ರಲ್ಲಿ ಇಬ್ಬರೂ ಒಟ್ಟಿಗೆ ವಾಸಿಸಲು ನೋಂದಾಯಿತ ಒಪ್ಪಂದವನ್ನು ಮಾಡಿಕೊಂಡಿದ್ದರು.