ಪಾಟ್ನಾ(ಬಿಹಾರ):ಮುಂಗಾರು ಅಬ್ಬರ ಶುರುವಾಗಿದ್ದು, ಬಿಹಾರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಿಡಿಲು ಬಡಿದು ಕನಿಷ್ಠ 23 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರೀ ಮಳೆ, ಗುಡುಗು, ಮಿಂಚು ಪ್ರವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿರುವುದು ಅತ್ಯಧಿಕವಾಗಿದೆ. ಇದಲ್ಲದೇ, ಜಹಾನಾಬಾದ್, ಬಕ್ಸಾರ್ ಮತ್ತು ಜಮುಯಿಯಲ್ಲಿ ತಲಾ ಮೂರು, ಗಯಾ, ಬಂಕಾ ಮತ್ತು ಭಾಗಲ್ಪುರದಲ್ಲಿ ತಲಾ ಎರಡು, ಔರಂಗಾಬಾದ್ ಮತ್ತು ಕತಿಹಾರ್‌ನಲ್ಲಿ ತಲಾ ಒಂದು ಸಾವು ಆಗಿದೆ.
ಘಟನೆಗೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಪ್ರತಿ ಮೃತರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಿಡಿಲಿನಿಂದ ಆಗುತ್ತಿರುವ ಅನಾಹುತದಿಂದ ತಪ್ಪಿಸಿಕೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಹವಾಮಾನ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಮಾರ್ಗಸೂಚಿಗಳೇನು?:ಭಾರೀ ಮಳೆಯ ಸಮಯದಲ್ಲಿ ಜನರು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು, ಮರಗಳು, ವಿದ್ಯುತ್ ಕಂಬಗಳು ಅಥವಾ ಮಣ್ಣಿನಿಂದ ಮಾಡಿದ ಮನೆಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕೆಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.
ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಕಿಟಕಿಗಳಿಂದ ದೂರವಿರಿ, ಮಳೆಯ ಸಮಯದಲ್ಲಿ ರೆಫ್ರಿಜರೇಟರ್, ಎಸಿಗಳಂತಹ ವಿದ್ಯುತ್ ಉಪಕರಣಗಳನ್ನು ಮುಟ್ಟಬೇಡಿ. ಕಟ್ಟಡಗಳ ಮೇಲ್ಛಾವಣಿಗೆ ಹೋಗುವುದನ್ನು ತಪ್ಪಿಸುವಂತೆ ಜನರಿಗೆ ಎಚ್ಚರಿಕೆ ನೀಡಿದೆ.