ಪಾಟ್ನಾ: ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಈವರೆಗೆ 24 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಒಂದೇ ದಿನ ಸಿಡಿಲಿಗೆ ಒಂಬತ್ತು ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸಿಎಂ ನಿತೀಶ್ ಕುಮಾರ್ ಸೂಚಿಸಿದ್ದಾರೆ. ಈ ಮಧ್ಯೆ ಹವಾಮಾನ ಇಲಾಖೆಯು ಬಿಹಾರದ 26 ಜಿಲ್ಲೆಗಳಿಗೆ ಇಂದು ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಸಿಡಿಲಿಗೆ 24 ಮಂದಿ ಸಾವು :ನೈಸರ್ಗಿಕ ವಿಕೋಪ ಪೀಡಿತ ಜಿಲ್ಲೆಗಳಲ್ಲಿ ಪಾಟ್ನಾ, ರೋಹ್ತಾಸ್, ಅರ್ವಾಲ್, ಮುಜಾಫರ್‌ಪುರ, ನಳಂದಾ, ಔರಂಗಾಬಾದ್ ಮತ್ತು ವೈಶಾಲಿ ಸೇರಿದಂತೆ ಇತರೆ ಜಿಲ್ಲೆಗಳಿವೆ. ರೋಹ್ತಾಸ್‌ನಲ್ಲಿ 5, ಅರ್ವಾಲ್‌ನಲ್ಲಿ 4, ಛಾಪ್ರಾದಲ್ಲಿ 3, ಔರಂಗಾಬಾದ್ ಮತ್ತು ಪೂರ್ವ ಚಂಪಾರಣ್‌ನಲ್ಲಿ 2, ಕೈಮೂರ್, ಸೀತಾಮರ್ಹಿ, ಮುಜಾಫರ್‌ಪುರ, ಪಾಟ್ನಾ, ವೈಶಾಲಿ ನಳಂದಾ, ಅರಾರಿಯಾ, ಕಿಶನ್‌ಗಂಜ್, ಬಂಕಾ ಮತ್ತು ಸಿವಾನ್‌ನಲ್ಲಿ ತಲಾ 1 ಸಾವುಗಳು ಸಂಭವಿಸಿವೆ. ಜನರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್, ಮಳೆಗಾಲದಲ್ಲಿ ಜನರು ಅನಗತ್ಯವಾಗಿ ಹೊರಗೆ ಹೋಗದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ :Watch...ಋಷಿಕೇಶದ ಗಂಗೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ರಕ್ಷಿಸಿದ ಪೊಲೀಸರು..
ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ : ಇದೇ ವೇಳೆ ಇಂದು ಕೂಡ ಹವಾಮಾನ ಇಲಾಖೆ ರಾಜ್ಯದ 26 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಮುಂದಿನ 24 ಗಂಟೆಗಳಲ್ಲಿ ಸಹರ್ಸಾ, ಖಗರಿಯಾ, ಮಾಧೇಪುರ, ಮಧುಬನಿ, ಪಶ್ಚಿಮ ಚಂಪಾರಣ್, ಭಾಗಲ್ಪುರ್, ಪುರ್ನಿಯಾ, ಕಿಶನ್‌ಗಂಜ್ ಮತ್ತು ಅರಾರಿಯಾ, ಪಾಟ್ನಾ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.