ಒಡಿಶಾ/ಜಮ್ಮು-ಕಾಶ್ಮೀರ:ದೇಶದ ಹಲವೆಡೆ ಮಳೆಯಾರ್ಭಟ ಜೋರಾಗಿದೆ. ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಇಂದು ಒಡಿಶಾದ ನುವಾಪಾದ ಜಿಲ್ಲೆಯಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟು, ಇಬ್ಬರು ಗಾಯಗೊಂಡರೆ, ಜಮ್ಮು ಕಾಶ್ಮೀರದಲ್ಲಿ ಭೂಕುಸಿತದಲ್ಲಿ ಸಿಲುಕಿ ಓರ್ವ ಮೃತಪಟ್ಟಿದ್ದಾನೆ.
ಒಡಿಶಾದ ಗ್ರಾಮವೊಂದರಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಮನೆಗೆ ಸಿಡಿಲು ಬಡಿದಿದೆ. ಇದರಿಂದ ಅದರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಒಬ್ಬರಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕೋಮ್ನಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಭೂಕುಸಿತ:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದೆ. ಘಟನೆಯಲ್ಲಿ 45 ವರ್ಷದ ಟ್ರಕ್ ಚಾಲಕ ಸಾವನ್ನಪ್ಪಿದ್ದು, ಹಲವಾರು ಅಂಗಡಿಗಳು ಹಾನಿಗೊಳಗಾಗಿವೆ.