ಪಾಟ್ನಾ (ಬಿಹಾರ) : ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಬಿಹಾರದ ಜನಜೀವನ ಅಸ್ತವ್ಯಸ್ತವಾಗಿದೆ. ಬಿಹಾರದ ಹಲವು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಬರೋಬ್ಬರಿ 26 ಮಂದಿ 24 ಗಂಟೆಯೊಳಗೆ ಸಾವನ್ನಪ್ಪಿದ್ದಾರೆ. ಸಿಡಿಲು ಬಡಿದು ರೋಹ್ತಾಸ್‌ನಲ್ಲಿ 6 ಮಂದಿ ಹಾಗು ಬಕ್ಸಾರ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಹಸುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ ಮಹಿಳೆ ಕೂಡ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ.
ಜೆಹಾನಾಬಾದ್‌ನಲ್ಲಿ ಮೂವರು ಸಾವು :ನಿನ್ನೆ (ಮಂಗಳವಾರ) ಸಂಜೆ ವಿವಿಧೆಡೆ ಸಿಡಿಲು ಬಡಿದು 3 ಮಂದಿ ಸಾವನ್ನಪ್ಪಿದ್ದಾರೆ. ಮೊದಲ ಘಟನೆ ಜಿಲ್ಲೆಯ ಹುಲಸ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರುಸ್ತಮ್‌ಚಕ್ ಗ್ರಾಮದಲ್ಲಿ ಸಿಡಿಲು ಬಡಿದು ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತಪಟ್ಟಿದ್ದಾನೆ. ಮತ್ತೊಂದೆಡೆ, ಎರಡನೇ ಘಟನೆ ಕಾಕೋ ಪೊಲೀಸ್ ಠಾಣೆ ವ್ಯಾಪ್ತಿಯ ಬಾಧರ್ ಗ್ರಾಮದಲ್ಲಿ ಹಸು ಮೇಯಿಸುತ್ತಿದ್ದಾಗ ಏಕಾಏಕಿ ಸುರಿದ ಮಳೆಗೆ ವ್ಯಕ್ತಿಯೊಬ್ಬ ಮೃತಪಟ್ಟರೇ, ಮೂರನೇ ಘಟನೆ ಪರಾಸ್ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ತಿಟೈ ಬಿಘಾ ಗ್ರಾಮದಲ್ಲಿ ಮಳೆ ಸುರಿಯುವ ವೇಳೆ ಸ್ನಾನ ಮಾಡುವಾಗ ಯುವಕನೊಬ್ಬ ಚಳಿಯಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬಂಕಾದಲ್ಲಿ ಇಬ್ಬರು ಸಾವು : ಭಾರಿ ಮಳೆಯೊಂದಿಗೆ ಸಿಡಿಲು ಬಡಿದು ಬಂಕಾದಲ್ಲಿ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೆಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುವಾ ಗ್ರಾಮದಲ್ಲಿ ಘಟನೆ ನಡೆದಿದೆ. ಇಬ್ಬರಿಗೂ ಸಿಡಿಲು ಬಡಿದ ನಂತರ ಕುಟುಂಬಸ್ಥರು ಸಂಗ್ರಾಮಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಇಬ್ಬರೂ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಕತಿಹಾರ್‌ನಲ್ಲೂ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾರೆ.