ಮುಂಬೈ:ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆ ಅಬ್ಬರಿಸಿದ್ದು, ಆಲಿಕಲ್ಲುಗಳು ಸುರಿದಿವೆ. ಇದರಿಂದ ಕಳೆದ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಸಿಡಿಲು ಬಡಿತ ಸೇರಿದಂತೆ ವಿವಿಧ ಕಾರಣಗಳಿಗೆ 13 ಜನರು ಮೃತಪಟ್ಟರೆ, ನೀರಿನಲ್ಲಿ ಮುಳುಗಿ ಒಬ್ಬರು ಸಾವನ್ನಪ್ಪಿದ್ದಾರೆ.
ಅಕೋಲಾದ ಪರಸ್‌ಗಾಂವ್ ಗ್ರಾಮದಲ್ಲಿನ ಬಾಬೂಜಿ ಮಹಾರಾಜ್ ಸಂಸ್ಥಾನದ ಆಶ್ರಮದಲ್ಲಿ ಭಾನುವಾರ ರಾತ್ರಿ ಭೀಕರ ದುರಂತ ಸಂಭವಿಸಿದೆ. ಆಶ್ರಮದಲ್ಲಿ ನೂರಾರು ಜನರು ಪ್ರಾರ್ಥನೆ ಸಲ್ಲಿಸಲು ಭಕ್ತರು ಬಂದಿದ್ದರು. ಈ ವೇಳೆ ಗುಡುಗು, ಮಿಂಚು ಸಹಿತ ಮಳೆ ಆರಂಭವಾಗಿದೆ. 150 ವರ್ಷಗಳಷ್ಟು ಹಳೆಯದಾದ ಬೇವಿನ ಮರದ ಕೆಳಗೆ ಭಕ್ತರು ಆಶ್ರಯ ಪಡೆದಿದ್ದಾರೆ. ಮರದ ಕೆಳಗಿನ ಶೆಡ್ನಲ್ಲಿ ನಿಂತಿದ್ದಾಗ ಬರಸಿಡಿಲಿನಿಂದ 7 ಜನರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಸಿಡಿಲೇಟಿನಿಂದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರ ಗಾಯಕ್ಕೀಡಾಗಿದ್ದ ಮೂವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೇ, ಔರಂಗಾಬಾದ್, ಬೀಡ್, ಹಿಂಗೋಲಿ, ನಂದೂರ್ಬಾರ್, ಪರ್ಭಾನಿ ಮತ್ತು ಪುಣೆಯಲ್ಲಿ ಸಿಡಿಲು ಬಡಿತದಿಂದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಸೇರಿ ನಾಲ್ವರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ನಾಸಿಕ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಒಬ್ಬರು ನೀರಿಗೆ ಕೊಚ್ಚಿ ಹೋಗಿದ್ದಾರೆ. ಕಳೆದ ಕೆಲವು ವಾರಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಕೂಲ ಹವಾಮಾನದಿಂದ ವಿಪತ್ತುಗಳು ಉಂಟಾಗುತ್ತಿವೆ. ಹಲವಾರು ಪ್ರಾಣಿಗಳು ಕೂಡ ಪ್ರಾಣ ಕಳೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.