ನವದೆಹಲಿ: ಇಂದು ಮುಂಜಾನೆ ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳು ಮತ್ತು ಅದರ ಅಕ್ಕ ಪಕ್ಕದ ಎನ್‌ಸಿಆರ್ ಪ್ರದೇಶಗಳಲ್ಲಿ ಮಳೆಯ ಸಿಂಚನವಾಗಿದ್ದು, ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಶನಿವಾರದಂದು ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಾರ್ಚ್ 17 ರಿಂದ 20 ರ ವರೆಗೆ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಲಘು / ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಶುಕ್ರವಾರ ಹೇಳಿತ್ತು. ಇನ್ನು ಈಶಾನ್ಯ ದೆಹಲಿ, ವಾಯುವ್ಯ ದೆಹಲಿ, ಪಶ್ಚಿಮ ದೆಹಲಿ, ನೈಋತ್ಯ ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಹಗುರ ಮಳೆಯಾಗಲಿದೆ ಎಂದು ಇಂದು ಬೆಳಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
"ಮುಂದಿನ ಎರಡು ಗಂಟೆಗಳಲ್ಲಿ ಕೈತಾಲ್, ನರ್ವಾನಾ, ರಜೌಂಡ್, ಅಸ್ಸಂದ್, ಸಫಿಡಾನ್ (ಹರಿಯಾಣ) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಸಿವಿಲ್ ಲೈನ್ಸ್, ಸೀಲಂಪುರ್, ವಿವೇಕ್ ವಿಹಾರ್, ಐಜಿಐ ವಿಮಾನ ನಿಲ್ದಾಣ, ಎನ್‌ಸಿಆರ್ (ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಗುರುಗ್ರಾಮ್, ಮನೇಸರ್) ದಿಯೋಬಂದ್, ನಜಿಬಾಬಾದ್, ಶಾಮ್ಲಿ, ಬಿಜ್ನೌರ್, ಚಂದ್‌ಪುರ, ಬಾಗ್‌ಪತ್, ಮೀರತ್, ಖೇಕ್ರಾ, ಮೋದಿನಗರ (ಉತ್ತರ ಪ್ರದೇಶ) ದಲ್ಲಿ ಗುಡುಗು ಸಹಿತ ಲಘು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತೆಲಂಗಾಣದಲ್ಲಿ ಆಲಿಕಲ್ಲು ಮಳೆ: ಗುರುವಾರ ಮಧ್ಯಾಹ್ನ ತೆಲಂಗಾಣದ ಹಲವೆಡೆ ಆಲಿಕಲ್ಲು ಮಳೆ ಸುರಿದಿದ್ದು, ಬೆಳೆ ಹಾನಿಯಾಗಿದೆ. ಸಂಗಾರೆಡ್ಡಿ, ವಿಕಾರಾಬಾದ್, ರಂಗಾರೆಡ್ಡಿ, ಮೇಡ್ಚಲ್-ಮಲ್ಕಾಜ್‌ಗಿರಿ, ನಲ್ಗೊಂಡ ಮತ್ತು ಜಂಟಿ ಮೆಹಬೂಬ್‌ನಗರ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಕಟಾವಿಗೆ ಬಂದಿದ್ದ ಬೆಳೆ ಹಾಗೂ ತರಕಾರಿ ನೀರು ಪಾಲಾಗಿದೆ.
ಇದನ್ನೂ ಓದಿ:ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ನಿಂತ ಮಳೆ ನೀರು: ವಾಹನ ಸವಾರರ ಆಕ್ರೋಶ
ವಿಕಾರಾಬಾದ್ ಮತ್ತು ನಲ್ಗೊಂಡ ಜಿಲ್ಲೆಯ ನಾಂಪಲ್ಲಿ ಮಂಡಲದಲ್ಲಿ ಆಲಿಕಲ್ಲು ಮಳೆಯಾಗಿದೆ. ಪರಿಣಾಮ ಹಲವಾರು ವಾಹನಗಳು ಮತ್ತು ಮನೆಗಳ ಗಾಜುಗಳು ಜಖಂಗೊಂಡಿವೆ. ಮತ್ತೊಂದೆಡೆ, ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ರಾಜಧಾನಿ ಹೈದರಾಬಾದ್ನ ಹಲವಾರು ಪ್ರದೇಶಗಳಲ್ಲಿ ಸಹ ಭಾರಿ ಮಳೆಯಾಗಿದ್ದು, ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಮೂರು ವಿಮಾನಗಳು ಲ್ಯಾಂಡ್ ಆಗುವುದು ಸ್ಥಗಿತಗೊಂಡಿದೆ. ಜೊತೆಗೆ, ಭಾನುವಾರವೂ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಹಾನಿ ಕುರಿತು ಮಾಹಿತಿ ನೀಡಿರುವ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ಬೆಳೆ ಹಾನಿಯಿಂದಾಗಿ ಸಂಗಾರೆಡ್ಡಿ ಮತ್ತು ವಿಕಾರಾಬಾದ್ ಜಿಲ್ಲೆಗಳಿಂದ ಹೈದರಾಬಾದ್ ನಗರಕ್ಕೆ ತರಕಾರಿ ಪೂರೈಸಲು ತೊಡಕಾಗಿದೆ. ಸಂಗಾರೆಡ್ಡಿ ಜಿಲ್ಲೆಯ ಮುನಿಪಲ್ಲಿ, ಜಹಿರಾಬಾದ್, ಕೋಹಿರ್, ವಿಕಾರಾಬಾದ್ ಜಿಲ್ಲೆಯ ಮಾರ್ಪಳ್ಳಿ, ಮೋಮಿನಪೇಟ್ ಮಂಡಲದಲ್ಲಿ 1000 ಎಕರೆ ಪ್ರದೇಶದಲ್ಲಿ ಈರುಳ್ಳಿ, 500 ಎಕರೆಯಲ್ಲಿ ತರಕಾರಿ, 250 ಎಕರೆ ಮಾವು ಮತ್ತು 50 ಎಕರೆ ಜಮೀನಿನಲ್ಲಿದ್ದ ಪಪ್ಪಾಯಿ ಬೆಳೆ ನಾಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.