ಭಾರತ ಸಿನಿಮಾ ರಂಗದ ಹಿನ್ನೆಲೆ ಗಾಯನ ಕ್ಷೇತ್ರದ ಮಹಾನ್ ಸಾಧಕಿಯಾಗಿರುವ ಲತಾ ಮಂಗೇಶ್ಕರ್ ಗಾನ ಕೋಗಿಲೆ ಎಂದೇ ಹೆಸರಾಗಿದ್ದಾರೆ. ಮಾಧುರ್ಯಪೂರ್ಣ ಗಾಯನಕ್ಕೆ ಮತ್ತೊಂದು ಹೆಸರಾಗಿರುವ ಇವರನ್ನು ಇಡೀ ದೇಶ ಪ್ರೀತಿಯಿಂದ ಲತಾ ದೀದಿ ಎಂದು ಕರೆದು ಗೌರವಿಸುತ್ತದೆ. ವಿಶಿಷ್ಟ ಮತ್ತು ಗೌರವಪೂರ್ಣ ವ್ಯಕ್ತಿತ್ವದ ಲತಾ ಮಂಗೇಶ್ಕರ್ ತಮ್ಮ ಜೀವಿತ ಕಾಲದಲ್ಲೇ ದಂತಕತೆಯಾದವರು. ಇಂದು ನಮ್ಮನೆಲ್ಲ ಅಗಲಿರುವ ಗಾನಸುಧೆಯ ಜೀವನ ಮತ್ತು ಸಾಧನೆಗಳ ಬಗೆಗಿನ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಲತಾ ಮಂಗೇಶ್ಕರ್ ಅವರು 1929ರ ಸೆಪ್ಟಂಬರ್ 28ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಜನಿಸಿದರು. ಹೇಮಾ ಅನ್ನುವುದು ಲತಾ ಅವರ ಮೂಲ ಹೆಸರು. ‘ಭವ ಬಂಧನ್’ ಎಂಬ ನಾಟಕದಲ್ಲಿ ಅಭಿನಯಿಸಿದ ಬಳಿಕ ಹೇಮಾ ಅನ್ನುವ ಹೆಸರು ಲತಾ ಎಂದು ಬದಲಾಯಿತು. ಲತಾ ಅವರ ತಂದೆ ದೀನಾನಾಥ್ ಮಂಗೇಶ್ಕರ್ ಅವರು ಶಾಸ್ತ್ರೀಯ ಸಂಗೀತ ಸಾಧಕರಾಗಿದ್ದರು ಮತ್ತು ಸಂಚಾರಿ ನಾಟಕ ತಂಡದ ಮಾಲೀಕರಾಗಿದ್ದರು. ದೀನಾನಾಥ್ ಅವರಿಗೆ ಲತಾ ಅವರ ಜೊತೆಗೆ ಆಶಾ, ಮೀನಾ, ಉಷಾ ಎಂಬ ಹೆಣ್ಣುಮಕ್ಕಳು ಮತ್ತು ಹೃದಯನಾಥ್ ಎಂಬ ಮಗನೂ ಇದ್ದರು.
13ನೇ ವರ್ಷಕ್ಕೆ ಕುಟುಂಬ ನಿರ್ವಹಣೆ ಜವಾಬ್ದಾರಿ..
ಐದು ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ತಮ್ಮ ತಂದೆಯ ನಾಟಕಗಳಲ್ಲಿ ಹಾಡತೊಡಗಿದ್ದ ಲತಾ, ಶಾಲೆಗೆ ಹೋಗಿ ಸಾಂಪ್ರದಾಯಕ ಶಿಕ್ಷಣ ಪಡೆಯಲು ಆಗಲೇ ಇಲ್ಲ. ಹೇಗೋ ಒಂದುರೀತಿಯಲ್ಲಿ ಸಾಗುತ್ತಿದ್ದ ಸಂಸಾರಕ್ಕೆ 1942ರಲ್ಲಿ ಬರಸಿಡಿಲು ಬಡಿದಂತಾಯಿತು. ದೀನಾನಾಥ್ ಮಂಗೇಶ್ಕರ್ ಅವರು ತಮ್ಮ 41ನೇ ವಯಸ್ಸಿನಲ್ಲಿ ಶ್ವಾಸಕೋಶದ ಸಮಸ್ಯೆಯಿಂದ ಸಾವಿಗೀಡಾದರು. ತಂದೆಯ ಸಾವಿನ ಬಳಿಕ ಇಡೀ ಕುಟುಂಬದ ನಿರ್ವಹಣೆ ಜವಾಬ್ದಾರಿ 13 ವರ್ಷದ ಬಾಲಕಿ ಲತಾ ಅವರ ಮೇಲೆ ಬಿದ್ದಿತು. ಹಾಡುವುದು ಮಾತ್ರ ಗೊತ್ತಿದ್ದ ಪುಟ್ಟ ಬಾಲಕಿ ಅದನ್ನೇ ಬಳಸಿಕೊಂಡು ತನ್ನ ಕುಟುಂಬ ನಿರ್ವಹಣೆ ಮಾಡಬೇಕಾದಂಥ ಅನಿವಾರ್ಯತೆ ಸೃಷ್ಟಿಯಾಯಿತು.
ತಂದೆ ತೀರಿಕೊಂಡ ವರ್ಷದಲ್ಲೇ ವಸಂತ್ ಜೋಗಳೇಕರ್ ಅವರ ಮರಾಠಿ ಸಿನೆಮಾ ‘ಕಿತಿ ಹಾಸಲ್’ ಸಿನಿಮಾಗಾಗಿ ‘ನಾಚು ಯಾ ಗದೆ ಖೇಲು ಸಾರಿ’ ಎಂಬ ಹಾಡನ್ನು ಲತಾ ಅವರು ಹಾಡಿದರಾದರೂ ಕೂಡ, ಅದಕ್ಕೆ ಎಡಿಟಿಂಗ್ ವೇಳೆ ಕತ್ತರಿ ಪ್ರಯೋಗವಾಯಿತು. ಇದಾದ ಬಳಿಕ ಮಾಸ್ಟರ್ ವಿನಾಯಕ್ ದಾಮೋದರ್ ಕರ್ನಾಟಕಿ ಅವರ ಮರಾಠಿ ಚಿತ್ರ ‘ಪಹಿಲಿ ಮಂಗ್ಲಾಗೌರ್’ದಲ್ಲಿ ನಾಯಕಿಯ ತಂಗಿಯ ಪಾತ್ರದಲ್ಲಿ ನಟಿಸಿದ್ದ ಲತಾ, ಆ ಚಿತ್ರದಲ್ಲಿ ಮೂರು ಹಾಡುಗಳನ್ನು ಹಾಡಿದ್ದರು. ಆ ಬಳಿಕ ವಿನಾಯಕ್ ಅವರು, ತಿಂಗಳಿಗೆ 60 ರೂಪಾಯಿ ಸಂಬಳ ನೀಡಿ ಲತಾರನ್ನು ತಮ್ಮ ಕಂಪನಿಯ ಕಲಾವಿದರಾಗಿ ನೇಮಕ ಮಾಡಿಕೊಳ್ಳುತ್ತಾರೆ. ತಂದೆಯ ಸಾವಿನ ಬಳಿಕ, ಕೆಲಕಾಲ ಪುಣೆ ಮತ್ತು ಕೊಲ್ಹಾಪುರದಲ್ಲಿ ವಾಸವಿದ್ದ ಲತಾ ಕುಟುಂಬ, 1947ರಲ್ಲಿ ಮುಂಬೈ ನಗರಕ್ಕೆ ಬಂದು ನೆಲೆಸಿತು.
ಲತಾ ಅವರು ಶಾಸ್ತ್ರೀಯ ಸಂಗೀತ ಕಲಿಯುವ ಸಲುವಾಗಿ ಅಮನ್ ಅಲಿ ಖಾನ್ ಭಿಂಡೀ ಬಜಾರ್ ವಾಲ ಅವರಲ್ಲಿ ಸೇರಿಕೊಳ್ಳುತ್ತಾರೆ. ಆದರೆ ಅಮನ್ ಅಲಿ ಅವರು ದೇಶ ವಿಭಜನೆ ಬಳಿಕ ಪಾಕಿಸ್ತಾನಕ್ಕೆ ಹೊರಟುಹೋದ ಮೇಲೆ ಅಮಾನತ್ ಅಲಿ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸುತ್ತಾರೆ. ಒಮ್ಮೆ ಸಂಗೀತಗಾರ ಮಾಸ್ಟರ್ ಗುಲಾಮ್ ಹೈದರ್ ಅವರು, ಲತಾರನ್ನು ಫಿಲ್ಮಿಸ್ತಾನ್ ಕಂಪನಿಯ ಶುಭೋದ್ ಮುಖರ್ಜಿ ಅವರ ಬಳಿಗೆ ಕರೆದೊಯ್ದು ಅವರೆದುರು ಹಾಡಿಸುತ್ತಾರೆ. ಅವರು, ಈ ಚಿಕ್ಕ ಹುಡುಗಿಯ ಧ್ವನಿ ಕೀರಲು ಎಂದು ಹೇಳಿ ತಿರಸ್ಕರಿಸಿದಾಗ, ಇವತ್ತು ನೀವು ತಿರಸ್ಕರಿಸುವ ಹುಡುಗಿ ಮನೆ ಮುಂದೆ ಸಿನಿಮಾ ನಿರ್ಮಾಪಕರು ಕ್ಯೂ ನಲ್ಲಿ ನಿಲ್ಲುವ ದಿನಗಳು ದೂರವಿಲ್ಲ ನೋಡುತ್ತಿರಿ ಎಂದು ಹೇಳಿ ಅಲ್ಲಿಂದ ಹೊರಡುತ್ತಾರೆ.
ಹಿನ್ನೆಲೆ ಗಾಯಕಿಯಾಗಲು ನೆರವಾದ ಹಾಡಿದು..
1948ರಲ್ಲಿ ಗುಲಾಮ್ ಹೈದರ್ ಅವರು ತಮ್ಮ ಸಂಗೀತ ನಿರ್ದೇಶನದ ‘ಮಜ್ಬೂರ್’ ಸಿನೆಮಾದಲ್ಲಿ ಹಾಡುವ ಅವಕಾಶ ನೀಡುತ್ತಾರೆ. ಇದಾದ ಕೆಲ ದಿನಗಳ ಬಳಿಕ ನೌಷದ್ ಅವರ ಸಂಗೀತ ನಿರ್ದೇಶನದ 'ಅಂದಾಝ್' (1949) ಚಿತ್ರದ 'ಉತಾಯೆ ಜಾ ಉನ್ಕೆ ಸಿತಮ್' ಹಾಡನ್ನು ಹಾಡಲು ಲತಾ ಅವರಿಗೆ ಅವಕಾಶ ಸಿಗುತ್ತದೆ. ಈ ಹಾಡು ಸಾಕಷ್ಟು ಜನಪ್ರಿಯವಾಗುತ್ತದೆ. ಆ ಬಳಿಕ 'ಬರ್ಸಾತ್' ಚಿತ್ರದ 'ಜಿಯಾ ಬೇಕರಾರ್ ಹೈ' ಹಾಡು ಲತಾ ಅವರನ್ನು ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಳ್ಳಲು ನೆರವಾಗುತ್ತದೆ. ಆ ನಂತರ ಕಮಾಲ್ ಅಮ್ರೋಹಿ ನಿರ್ದೇಶನದ ಮಧುಭಾಲ ನಟನೆಯ 'ಮಹಲ್' ಸಿನಿಮಾದ 'ಆಯೇಗಾ ಆನೇ ವಾಲಾ' ಹಾಡು ಲತಾ ಮಂಗೇಶ್ಕರ್ ಅವರ ಬದುಕಿನ ದಿಕ್ಕು ದೆಸೆಗಳನ್ನೇ ಬದಲಿಸಿಬಿಡುತ್ತದೆ. ಲತಾ ಅವರು ಬಹುಬೇಡಿಕೆಯ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮುತ್ತಾರೆ.
ದಣಿವರಿಯದ ದೇವತೆ..
ಅಲ್ಲಿಂದಾಚೆಗೆ ನರ್ಗಿಸ್ ರಿಂದ ವಹಿದಾ ರಹಮಾನ್ ವರೆಗೆ, ಮಾಧುರಿ ದೀಕ್ಷಿತ್ ರಿಂದ ಪ್ರೀತಿ ಝಿಂಟಾವರೆಗೆ ಹಲವು ಪೀಳಿಗೆಯ ನಾಯಕಿಯರಿಗಾಗಿ ಸುಮಾರು 5 ದಶಕಗಳ ಕಾಲ ‘ದಣಿವರಿಯದ ದೇವತೆಯಂತೆ’ ಲತಾ ಹಾಡುತ್ತಲೇ ಹೋಗುತ್ತಾರೆ. ಅನಿಲ್ ಬಿಸ್ವಾಸ್, ನೌಷಾದ್, ಶಂಕರ್-ಜೈಕಿಷನ್, ಸಿ.ರಾಮಚಂದ್ರ, ಎಸ್.ಡಿ.ಬರ್ಮನ್, ಮದನ್ ಮೋಹನ್, ರೋಷನ್, ಸಲಿಲ್ ಚೌಧರಿ, ಹೇಮಂತ್ ಕುಮಾರ್, ವಸಂತ್ ದೇಸಾಯಿ ಮತ್ತಿತರ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಾವಿರಾರು ಹಾಡುಗಳನ್ನು ಹಾಡುತ್ತಲೇ ಗಾಯನ ಕ್ಷೇತ್ರದ ದಂತಕತೆಯ ಸ್ವರೂಪ ಪಡೆಯುತ್ತಾರೆ. ತಮ್ಮ ಮೃದು ಮಧುರ ಮತ್ತು ಭಾವ ಪೂರ್ಣ ಕಂಠದಿಂದಾಗಿ 'ಮಾಧುರ್ಯ ಸಾಮ್ರಾಜ್ಞಿ' ಎಂದು ಹೆಸರಾಗುತ್ತಾರೆ.