ಶ್ರೀನಗರ: ಐಸಿಸಿ ಟಿ-20 ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಕೋಟ್ಯಂತರ ಅಭಿಮಾನಿಗಳು ನಿರಾಸೆಗೊಳಗಾಗಿದ್ದಾರೆ. ಅದಾಗ್ಯೂ ಜಮ್ಮು-ಕಾಶ್ಮೀರದ ಕೆಲವೊಂದು ಪ್ರದೇಶಗಳಲ್ಲಿ ಪಾಕ್ ಗೆಲುವಿನ ಸಂಭ್ರಮ ಮಾಡಲಾಗಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಪಾಕಿಸ್ತಾನದ ಗೆಲುವು ಸಂಭ್ರಮಿಸಿದ್ದಕ್ಕೆ ಜನರು ಏಕೆ ಉದ್ರೇಕಗೊಂಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಮುಫ್ತಿ, ಭಾರತದ ವಿರುದ್ಧ ಗೆದ್ದ ಪಾಕ್ ಗೆಲುವನ್ನ ಸಂಭ್ರಮಿಸುತ್ತಿರುವ ಕಾಶ್ಮೀರಿಗಳ ಮೇಲೆ ಇಷ್ಟೊಂದು ಕೋಪ ಏಕೆ? ಕೆಲವರು ಕೊಲೆಗಡುಕ ಘೋಷಣೆ ಕೂಗುತ್ತಿದ್ದಾರೆ. ದೇಶ ದ್ರೋಹಿಗಳಿಗೆ ಗುಂಡಿಕ್ಕಿ ಕೊಲೆ ಮಾಡಿ ಎಂಬ ಕರೆ ನೀಡುತ್ತಿದ್ದಾರೆ. ಆದರೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದುಕೊಳ್ಳುತ್ತಿದ್ದಂತೆ ಅನೇಕರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು ಎಂಬುದನ್ನ ಯಾರೂ ಮರೆತಿಲ್ಲ ಎಂದಿದ್ದಾರೆ.